ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯ: ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ, ಆ.1: ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶ್ರಯ ದಲಿತ ಕಾಲೋನಿಯಲ್ಲಿ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಆರೋಪಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು ಮೂಲಭೂತ ಸೌಲಭ್ಯವನ್ನು ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಂದಿನ 15 ದಿನಗಳ ಒಳಗಾಗಿ ಬೇಡಿಕೆ ಈಡೇರದಿದ್ದಲ್ಲಿ ಗಾಳಿಬೀಡಿನಿಂದ ಜಿಲ್ಲಾಧಿಕಾರಿಗಳ ಕಚೇರಿಯರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಎಚ್ಚರಿಕೆ ನೀಡಿದ್ದಾರೆ.
ಕಾಲೋನಿಯಲ್ಲಿರುವ ಸಮುದಾಯ ಭವನ ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿದೆ. ಇಲ್ಲಿನ ನಿವಾಸಿಗಳು ಧಾರ್ಮಿಕ ಅಥವಾ ಸಾಂಸ್ಕೃತಿಕ ಸಭೆ, ಸಮಾರಂಭವನ್ನು ನಡೆಸಲು ಸಾಧ್ಯವಾಗದೆ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವಾರು ಬಾರಿ ಅರ್ಜಿ ಸಲ್ಲಿಸಿ ಬೇಡಿಕೆ ಈಡೇರಿಸುವಂತೆ ಅರ್ಜಿ ಸಲ್ಲಿಸಲಾಗಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ದಿವಾಕರ್ ಆರೋಪಿಸಿದ್ದಾರೆ.
ಶಿಥಿಲಗೊಂಡಿರುವ ಸಮುದಾಯ ಭವನವನ್ನು ಕೆಡವಿ ಅದೇ ನಿವೇಶನದಲ್ಲಿ ಗ್ರಾಮದ ಜನತೆಗೆ ಅನುಕೂಲವಾಗುವಂತೆ ನೂತನ ಸಮುದಾಯ ಭವನವನ್ನು ನಿರ್ಮಿಸಿ ಕೊಡಬೇಕು ಮತ್ತು ಸರಕಾರದ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಗ್ರಾಮಸ್ಥರ ಪರವಾಗಿ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.







