ಕೊರಿಯ ಕ್ಷಿಪಣಿಗಳಿಗೆ ಅಮೆರಿಕ ತಲುಪುವ ಸಾಮರ್ಥ್ಯ ಖಚಿತ ಪಡಿಸಿದ ಅಮೆರಿಕ ಅಧಿಕಾರಿಗಳು

ವಾಶಿಂಗ್ಟನ್, ಆ. 1: ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ (ಐಸಿಬಿಎಂ)ಯ ಇತ್ತೀಚಿನ ಯಶಸ್ವಿ ಪರೀಕ್ಷೆ ಬಳಿಕ, ಅಮೆರಿಕದ ಹೆಚ್ಚಿನ ಭೂಭಾಗಗಳನ್ನು ತಲುಪುವ ಸಾಮರ್ಥ್ಯವನ್ನು ಉತ್ತರ ಕೊರಿಯ ಹೊಂದಿರಬಹುದು ಎಂದು ಇಬ್ಬರು ಅಮೆರಿಕದ ಅಧಿಕಾರಿಗಳು ಸೋಮವಾರ ‘ರಾಯ್ಟರ್ಸ್’ಗೆ ಹೇಳಿದ್ದಾರೆ.
ಪ್ಯಾಂಗ್‌ಯಾಂಗ್ (ಉತ್ತರ ಕೊರಿಯದ ರಾಜಧಾನಿ)ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ಒಡ್ಡುತ್ತಿರುವ ಬೆದರಿಕೆಯನ್ನು ಈ ಸಮೀಕ್ಷೆಯು ಖಚಿತಪಡಿಸಿದೆ ಹಾಗೂ ಇದು ಪ್ರತಿಕ್ರಿಯಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಒತ್ತಡ ಹೇರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ತಾನು ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯ ಇನ್ನೊಂದು ಯಶಸ್ವಿ ಪರೀಕ್ಷೆಯನ್ನು ಮಾಡಿರುವುದಾಗಿಯೂ, ಇದು ಅಮೆರಿಕ ಪ್ರಧಾನ ನೆಲವನ್ನು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದಾಗಿಯೂ ಉತ್ತರ ಕೊರಿಯ ಶನಿವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ತನ್ನ ದೇಶದ ಮೇಲೆ ನಡೆಯುವ ಯಾವುದೇ ದಾಳಿಯನ್ನು ತಡೆಯುವುದಕ್ಕಾಗಿ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಪರಮಾಣು ಸಮರ್ಥ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲು ಬಯಸಿದ್ದಾರೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.
‘‘ಅಮೆರಿಕ ಅಥವಾ ಅದರ ಮಿತ್ರ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಅದಕ್ಕಿಲ್ಲ. ಹಾಗೆ ಮಾಡಿದರೆ ಅದು ಆತ್ಮಹತ್ಯಾಕಾರಕ ಎನ್ನುವುದು ಅವರಿಗೆ ಗೊತ್ತಿದೆ’’ ಎಂದರು.







