ಎಚ್‌ಡಿಕೆ ವರ್ತನೆಯಿಂದ ಜೆಡಿಎಸ್ ಬಿಡುತ್ತಿದ್ದೇವೆ: ಝಮೀರ್ ಅಹ್ಮದ್

ಬೆಂಗಳೂರು, ಆ.1: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯ ವರ್ತನೆಯಿಂದ ಬೇಸತ್ತು ಪಕ್ಷವನ್ನು ಬಿಡುವ ತೀರ್ಮಾನವನ್ನು ನಾವು ಏಳು ಜನ ಶಾಸಕರು ಮಾಡಿದ್ದೇವೆ ಎಂದು ಜೆಡಿಎಸ್ ಬಂಡಾಯ ಶಾಸಕ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್ ತಿಳಿಸಿದ್ದಾರೆ.
ಮಂಗಳವಾರ ಚಾಮರಾಜಪೇಟೆಯ ಸಂಗಮ್ ಸರ್ಕಲ್‌ನಲ್ಲಿ ಅಭಿಮಾನಿಗಳು ಆಯೋಜಿಸಿದ್ದ ತಮ್ಮ 51ನೆ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಲಕ್ಷಾಂತರ ಜನ ಕಾರ್ಯಕರ್ತರು ನಮ್ಮನ್ನು ಪ್ರೀತಿಸುತ್ತಾರೆ. ಕಳೆದ ತಿಂಗಳವರೆಗೆ ನಾವು ಜೆಡಿಎಸ್‌ನಲ್ಲೆ ಇರಲು ಬಯಸಿದ್ದೆವು. ಆದರೆ, ನಮ್ಮ ‘ಮಾಜಿ ಅಣ್ಣ’ ಕುಮಾರಸ್ವಾಮಿ ನಮ್ಮ ಬಗ್ಗೆ ನೀಡುತ್ತಿರುವ ಲಘು ಹೇಳಿಕೆಗಳನ್ನು ನೋಡಿ ಪಕ್ಷ ಬಿಡುವ ತೀರ್ಮಾನವನ್ನು ನಾವು ಮಾಡಿದ್ದೇವೆ ಎಂದು ಅವರು ಹೇಳಿದರು.
ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷಕ್ಕೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಕೋಮುವಾದಿ ಬಿಜೆಪಿ ಜೊತೆಯೂ ಕೈ ಜೋಡಿಸುವುದಿಲ್ಲ. ಆದುದರಿಂದ, ನಾವೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿದ್ದೇವೆ. ರಾಜಕೀಯದಲ್ಲಿ ಹೋರಾಟ ಮಾಡಲೇಬೇಕು. ಜೆಡಿಎಸ್ ವರಿಷ್ಠ ದೇವೇಗೌಡರ ಋಣ ನನ್ನ ಮೇಲಿದೆ. ಅದನ್ನು ನನ್ನ ಕೊನೆಯ ಉಸಿರು ಇರುವವರೆಗೂ ಮರೆಯುವುದಿಲ್ಲ ಎಂದು ಅವರು ತಿಳಿಸಿದರು.
ದೇವೇಗೌಡರು ನನ್ನ ರಾಜಕೀಯ ಗುರು. ಕುಮಾರಸ್ವಾಮಿ ಅಲ್ಲ. ದೇವೇಗೌಡರು ನನಗೆ ಕೆಟ್ಟದು ಮಾಡಲಿ, ಒಳ್ಳೆಯದು ಮಾಡಲಿ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಇವತ್ತು ನನ್ನ ಹುಟ್ಟುಹಬ್ಬದ ದಿನ ನಾನು ಅವರ ವಿರುದ್ಧ ಮಾತನಾಡುವುದಿಲ್ಲ ಎಂದು ಝಮೀರ್‌ಅಹ್ಮದ್‌ಖಾನ್ ಹೇಳಿದರು.
ಬಿಬಿಎಂಪಿ ಸದಸ್ಯ ಇಮ್ರಾನ್‌ಪಾಷ ನನ್ನ ಜೊತೆಯಲ್ಲೆ ಇದ್ದಾರೆ. ಬೇರೆ ಕಾರ್ಯಕ್ರಮವಿದ್ದ ಕಾರಣ ಅವರು ಇಲ್ಲಿಗೆ ಬಂದಿಲ್ಲ. ಆದರೆ, ಅವರ ತಂದೆ ಆರೀಫ್ ಪಾಷ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಾನು ಯಾವ ಬೆಂಬಲಿಗರನ್ನು ನನ್ನ ಜೊತೆಯಲ್ಲಿ ಬಲವಂತವಾಗಿಟ್ಟುಕೊಂಡಿಲ್ಲ ಎಂದು ಝಮೀರ್‌ಅಹ್ಮದ್ ತಿಳಿಸಿದರು.
ನನ್ನ ಹುಟ್ಟುಹಬ್ಬ ಸಮಾರಂಭಕ್ಕೆ ಬಾಲಿವುಡ್ ನಟ ಸಲ್ಮಾನ್‌ಖಾನ್ ಬರಬೇಕಿತ್ತು. ಆದರೆ, ಚಲನಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಬರಲಿಲ್ಲ. ಅವರ ಸಹೋದರರಾದ ಅರ್ಬಾಝ್‌ಖಾನ್ ಹಾಗೂ ಸೋಹೆಲ್‌ಖಾನ್‌ರನ್ನು ಕಳುಹಿಸಿ ಕೊಟ್ಟಿದ್ದಾರೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ರಾಜಕೀಯ ಲಾಭಕ್ಕಾಗಿ ಬಾಲಿವುಡ್ ನಟರನ್ನು ಕರೆಸಲಿಲ್ಲ. ನನ್ನ ಕ್ಷೇತ್ರದ ಜನ ಬಡವರು, ನೇರವಾಗಿ ಅವರನ್ನು ನೋಡಲು ಸಾಧ್ಯವಾಗುವುದಿಲ್ಲ. ಆದುದರಿಂದ, ಅವರನ್ನು ಇಲ್ಲಿಗೆ ಕರೆಸಿದ್ದೇನೆ. ನನ್ನ ಮೇಲಿನ ಪ್ರೀತಿಯಿಂದ ಅವರು ಬಂದಿದ್ದಾರೆ. ಅಭಿಮಾನಿಗಳಿಗಾಗಿ ನಾನು ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ ಎಂದು ಝಮೀರ್‌ಅಹ್ಮದ್ ತಿಳಿಸಿದರು.
ರೋಡ್ ಶೋ: ಚಾಮರಾಜಪೇಟೆಯ ಬಿನ್ನಿಮಿಲ್ ರಸ್ತೆಯಲ್ಲಿರುವ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿಯಿಂದ ತೆರೆದ ವಾಹನದಲ್ಲಿ ಆರಂಭವಾದ ರೋಡ್ ಶೋ, ಗೋರಿ ಪಾಳ್ಯದ ಸಂಗಮ್ ಸರ್ಕಲ್‌ವರೆಗೆ ನಡೆಯಿತು. ರೋಡ್ ಶೋದಲ್ಲಿ ಬಾಲಿವುಡ್ ನಟರಾದ ಅರ್ಬಾಝ್‌ಖಾನ್, ಸೋಹೆಲ್‌ಖಾನ್, ಸೋನುಸೂದ್, ಗುಲ್ಷನ್ ಗ್ರೋವರ್ ಹಾಗೂ ಟಾಲಿವುಡ್ ನಟ ಅಲಿ, ಝಮೀರ್‌ಅಹ್ಮದ್‌ಖಾನ್ ಅವರ ಪುತ್ರ ಝೈದ್ ಅಹ್ಮದ್‌ಖಾನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಲಘು ಲಾಠಿ ಪ್ರಹಾರ: ಬಾಲಿವುಡ್ ನಟರನ್ನು ನೋಡಲು ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಬೇಕಾಯಿತು. ಅಭಿಮಾನಿಗಳ ನೂಕುನುಗ್ಗಲಿಗೆ ಸಮಾರಂಭದ ವೇದಿಕೆ ಬಳಿ ಹಾಕಲಾಗಿದ್ದ ಕುರ್ಚಿಗಳು ಹಾಗೂ ಬ್ಯಾನರ್‌ಗಳು ಹಾನಿಗೀಡಾದವು.
ಜನಪ್ರಿಯ ಶಾಸಕ ಝಮೀರ್‌ಅಹ್ಮದ್‌ಖಾನ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ನಾವು ಬಂದಿದ್ದೇವೆ. ಅವರ ಪುತ್ರ ಝೈದ್‌ಅಹ್ಮದ್‌ಖಾನ್ ಬಾಲಿವುಡ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ಅವರಿಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇವೆ.
-ಸೋಹೆಲ್‌ಖಾನ್, ನಟ-ನಿರ್ದೇಶಕ
ನೀವೆಲ್ಲ ಝಮೀರ್‌ಭಾಯ್ ಅವರನ್ನು ತುಂಬಾ ಪ್ರೀತಿಸುತ್ತೀರಾ, ನಿಮಗಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ನಾವು ನೋಡಿರುವಂತಹ ಕೆಲವೇ ಕೆಲವು ಜನಪ್ರಿಯ ರಾಜಕಾರಣಿಗಳ ಪೈಕಿ ಝಮೀರ್‌ಅಹ್ಮದ್ ಕೂಡ ಒಬ್ಬರು. ನಿಮ್ಮ ಪ್ರೀತಿ, ಸಹಕಾರ ಇನ್ನು ಮುಂದೆಯೂ ಅವರಿಗೆ ಇದೇ ರೀತಿ ಸಿಗುತ್ತಿರಲಿ.
-ಅರ್ಬಾಝ್‌ಖಾನ್, ನಟ-ನಿರ್ದೇಶಕ







