ಹಿಂದುಳಿದ ತಾಲೂಕುಗಳ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ: ಎಂ.ಆರ್.ಸೀತಾರಾಂ
ಬೆಂಗಳೂರು, ಆ.1: ನಂಜುಂಡಪ್ಪ ವರದಿಯನ್ನಾಧರಿಸಿ ಗುರುತಿಸಿರುವ 114 ಹಿಂದುಳಿದ ತಾಲೂಕು ಸಮಗ್ರ ಅಭಿವೃದ್ಧಿಯು ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ ಎಂದು ಯೋಜನೆ ಹಾಗೂ ಸಾಂಖ್ಯಿಕ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ 3 ಸಾವಿರ ಕೋಟಿ ರೂ.ಗಳಂತೆ 21 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದೆ. 2017-18ನೇ ಸಾಲಿನಲ್ಲಿಯೂ 3 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದ್ದು, ಒಟ್ಟು 24 ಸಾವಿರ ಕೋಟಿ ರೂ. ಖರ್ಚು ಮಾಡಿದಂತಾಗುತ್ತದೆ ಎಂದರು.
ಸಾಮಾನ್ಯ ಕ್ರಿಯಾ ಯೋಜನೆಗೆ ಇಷ್ಟು ಪ್ರಮಾಣದಲ್ಲಿ ಹಣ ಖರ್ಚು ಮಾಡಿದರೂ ನಂಜುಂಡಪ್ಪ ಸಮಿತಿ ಗುರುತಿಸಿರುವ ಈ ಹಿಂದುಳಿದ ತಾಲೂಕುಗಳ ಅಭಿವೃದ್ಧಿಯು ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಆದುದರಿಂದ, ಇನ್ನು ಮುಂದೆ ಆದ್ಯತಾ ವಲಯಗಳನ್ನು ಗುರುತಿಸಿ ಹಣ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ಎಂ.ಆರ್.ಸೀತಾರಾಂ ಹೇಳಿದರು.
ಈ ಸಂಬಂಧ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೆ ಅಥವಾ ಶಾಸನ ಸಭೆಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆಯೆ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೀತಾರಾಂ ಹೇಳಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಈಗಾಗಲೇ ತಲಾ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಕಳೆದ ವರ್ಷ ಖರ್ಚಾಗದೆ ಹಾಗೆ ಉಳಿದಿರುವ ಹಣವೂ ಇದೆ. ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಇನ್ನೂ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಮಾರ್ಚ್ ವೇಳೆಗೆ ಒಟ್ಟು 2 ಕೋಟಿ ರೂ.ವನ್ನು ಶಾಸಕರ ಪ್ರದೇಶಾಭಿವೃದ್ಧಿಗೆ ಒದಗಿಸುವುದಾಗಿ ಅವರು ತಿಳಿಸಿದರು.
ಕೊಡುಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಹೀಗಾಗಿ ಕುಡಿಯುವ ಉದ್ದೇಶಕ್ಕೆ ಹೊರತುಪಡಿಸಿ ಕೃಷಿ ಚಟುವಟಿಕೆಗಳಿಗೆ ನೀರು ಬಿಡದೆ ಇರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೀತಾರಾಂ ಹೇಳಿದರು.







