ಮಗುವಿಗೆ ಎದೆ ಹಾಲು ಉಣಿಸುವುದರಿಂದ ಅಪೌಷ್ಠಿಕತೆ ನಿವಾರಣೆ

ತುಮಕೂರು,ಆ.1:ತಾಯಿಯು ತನ್ನ ಮಗುವಿಗೆ ಹೆರಿಗೆ ಯಾದ ಅರ್ಧ ಗಂಟೆಯೊಳಗೆ ಎದೆ ಹಾಲು ಉಣಿಸುವುದರಿಂದ ಅಪೌಷ್ಠಿಕತೆಯನ್ನು ನಿವಾರಣೆ ಮಾಡಬಹುದಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ॥ ವೀರಭದ್ರಯ್ಯ ತಿಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾಸ್ಪತ್ರೆ ಆವರಣದ ಆಡಿಟೋರಿಯಂ ಸಭಾಂಗಣದಲ್ಲಿಂದು ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕುಲಕರ್ಣಿ, ರಾಜ್ಯದಲ್ಲಿ ಶೇ.58ರಷ್ಟು ತಾಯಂದಿರು ಹೆರಿಗೆಯಾದ ಅರ್ಧ ಗಂಟೆಯೊಳಗೆ ಹಾಲುಣಿಸುತ್ತಿದ್ದಾರೆ. ಹೆರಿಗೆಯಾದ ಅರ್ಧಗಂಟೆಯೊಳಗೆ ತಾಯಿ ಹಾಲುಣಿಸುವುದರಿಂದ ಹೆರಿಗೆ ಸಮಯದಲ್ಲಾಗುವ ರಕ್ತಸ್ರಾವ ತಡೆಗಟ್ಟಬಹುದು. ಮೌಢ್ಯತೆ ತೊಡೆದು ತಾಯಂದಿರು ಹೆರಿಗೆಯಾದ ಅರ್ಧ ಗಂಟೆಯಲ್ಲಿ ಹಾಲುಣಿಸಬೇಕು ಎಂದರು. ಹಸುಗಳು ಕರು ಹಾಕಿದಾಗ ಗಿಣ್ಣುಹಾಲನ್ನು ನಾವು ಸೇವಿಸುತ್ತೇವೆ. ಆದರೆ ತಾಯಿಯ ಹಾಲನ್ನ ಮಗುವಿಗೆ ಕೊಡದೆ ವ್ಯರ್ಥಮಾಡುವ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ಸಮಗ್ರ ಪೌಷ್ಠಿಕಾಂಶವನ್ನು ಹೊಂದಿರುವ ಗಿಣ್ಣು ಹಾಲನ್ನು ಮಗುವಿಗೆ ಕುಡಿಸಬೇಕು. ಬಾಟಲಿ ಹಾಲನ್ನು ಯಾವುದೇ ಕಾರಣಕ್ಕೂ ಕೊಡಬಾರದು. ಆರು ತಿಂಗಳವರೆಗೆ ತಾಯಿ ಹಾಲನ್ನಲ್ಲದೆ ಬೇರೆ ಏನನ್ನು ಮಗುವಿಗೆ ಕೊಡಬಾರದು ಎಂದು ಸಲಹೆ ನೀಡಿದರು.





