‘ವಿದೇಶಗಳಿಂದ ಮರಳು ಆಮದಿಗೆ ರಾಜ್ಯ ಸರಕಾರ ನಿರ್ಧಾರ’

ಬೆಂಗಳೂರು, ಆ.1: ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರವು, ವಿದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬರ್ಮಾ, ಮಲೇಷಿಯಾ, ಥೈಲ್ಯಾಂಡ್ ಸೇರಿದಂತೆ ಇನ್ನಿತರ ದೇಶಗಳಿಂದ ಮರಳನ್ನು 25 ಕೆಜಿ ತೂಕದ ಸಿಮೆಂಟ್ ಬ್ಯಾಗ್‌ಗಳ ಮಾದರಿಯಲ್ಲಿ ಆಮದು ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಆರು ಕಂಪೆನಿಗಳಿಗೆ ಅನುಮತಿ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತೀರ್ಮಾನಿಸಿದೆ.
ವಿದೇಶಗಳಿಂದ ಮರಳನ್ನು ಆಮದು ಮಾಡಿಕೊಳ್ಳುವುದರಿಂದ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತು ಉಳಿಯುತ್ತದೆ. ಅಲ್ಲದೆ, ಅಕ್ರಮ ಮರಳು ಗಣಿಗಾರಿಕೆಗೂ ಕಡಿವಾಣ ಹಾಕಿದಂತಾಗುತ್ತದೆ. ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ಮರಳು ಪೂರೈಸುವಂತೆ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳಿನ ಕೊರತೆ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಸರಕಾರ ಕೈಗೊಂಡಿದೆ. ಕಡಿಮೆ ದರದಲ್ಲಿ ಉತ್ತಮ ಮರಳು ನಿರ್ಮಾಣ ಕ್ಷೇತ್ರಕ್ಕೆ ಲಭ್ಯವಾಗಲಿದೆ. ಮುಂದಿನ ತಿಂಗಳಿನಿಂದ ಆರು ಕಂಪೆನಿಗಳಿಗೆ ಮರಳು ಪೂರೈಸಲು ಅನುಮತಿ ನೀಡಲು ಸರಕಾರ ಉದ್ದೇಶಿಸಿದೆ ಎಂದರು.
ನೈಸರ್ಗಿಕ ಸಂಪತ್ತು ಉಳಿಯುವುದರ ಜೊತೆಗೆ ಜಲ ಮೂಲಗಳಿಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಬಹುದು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮರಳು ಸಿಗುವುದಾದರೆ ಏಕೆ ಅನುಮತಿ ನೀಡಬಾರದು ಎಂದ ಅವರು, ಈ ಸಂಬಂಧ ಸಾಧಕ ಬಾಧಕಗಳ ಕುರಿತು ಚರ್ಚಿಸಿದ ಬಳಿಕವೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.







