ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಧರಣಿ

ಉಡುಪಿ, ಆ.1: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಉಡುಪಿಯ ವಿವಿಧ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಗಳವಾರ ಉಡುಪಿ ಅಜ್ಜರ ಕಾಡಿನಲ್ಲಿರುವ ಹುತ್ಮಾತರ ಸ್ಮಾರಕದ ಎದುರು ಧರಣಿ ನಡೆಸಿದರು.
ಅಜ್ಜರಕಾಡು ಮಹಿಳಾ ಕಾಲೇಜಿನ ಅತಿಥಿ ಉಪನ್ಯಾಸಕ ಶ್ರೀನಿವಾಸ ಕೆ. ಮಾತನಾಡಿ, ಕಳೆದ ಜೂನ್ ತಿಂಗಳಿನಿಂದ ಕಾಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನಾಲ್ಕು ಬಾರಿ ಗೊಂದಲಮಯ ಆದೇಶಗಳನ್ನು ಹೊರಡಿಸಿದೆ. ಈ ಆದೇಶದಲ್ಲಿ ಯಾವುದೇ ಸ್ಪಷ್ಟ ನಿಲುವುಗಳಿಲ್ಲ. ಇವುಗಳು 2013ರ ಆದೇಶಗಳಲ್ಲಿರುವ ಅಂಶ ಗಳಿಗೆ ವಿರುದ್ಧವಾಗಿವೆ. ಇದರಿಂದ 5-10ವರ್ಷಗಳಿಂದ ಉಪನ್ಯಾಸಕರಾಗಿ ದುಡಿಯುತ್ತಿರುವವರು ಕೆಲಸ ಕಳೆದುಕೊಂಡು ಬೀದಿ ಪಾಲಾಗಬೇಕಾಗುತ್ತದೆ. ಆದುದರಿಂದ ಇಲಾಖೆ ಜು.31ರಂದು ಹೊರಡಿಸಿದ ಆದೇಶವನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕ ಮಂಜಪ್ಪ ದ್ಯಾಗೋಣಿ ಮಾತನಾಡಿ, ಪ್ರತಿವರ್ಷ ಆನ್ ಲೈನ್ ನೇಮಕಾತಿಯನ್ನು ಕೈಬಿಟ್ಟು ಸೇವಾ ಹಿರಿತನವನ್ನು ಗುರುತಿಸಿ ಅರ್ಹ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರೆಸಬೇಕು. ಅತಿಥಿ ಉಪನ್ಯಾಸಕರ ಸೇವಾ ಅವಧಿಯನ್ನು 9 ತಿಂಗಳ ಬದಲು 12 ತಿಂಗಳಿಗೆ ನಿಗದಿಗೊಳಿಸಬೇಕು. ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಕಾರ್ಯಭಾರ ಇಲ್ಲದ ಸಂದರ್ಭದಲ್ಲಿ ಉಪ ನ್ಯಾಸಕರನ್ನು ಸರಕಾರದ ಇತರೆ ಇಲಾಖೆಯಲ್ಲಿ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಾರಕೂರು ನ್ಯಾಶನಲ್ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ವರದರಾಜ್, ಅತಿಥಿ ಉಪನ್ಯಾಸಕರಾದ ಮುಹಮ್ಮದ್ ರಫೀಕ್, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.







