ಅತ್ತೂರು ಬಾಸಿಲಿಕಾ ಲೋಕಾರ್ಪಣೆಯ ಪ್ರಥಮ ವರ್ಷಾಚರಣೆ

ಕಾರ್ಕಳ, ಆ.1: ಅತ್ತೂರಿನ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ ಲೋಕಾರ್ಪಣೆಯ ಪ್ರಥಮ ವರ್ಷದ ಆಚರಣೆ ಹಾಗೂ ಪಾಲಕ ಸಂತ ಲಾರೆನ್ಸರ ಮಹೋತ್ಸವದ ಆಚರಣೆಯ ಪೂರ್ವಭಾವಿ ನೊವೆನಾ ಪ್ರಾರ್ಥನೆಯ ಉದ್ಘಾಟನೆಯು ಮಂಗಳವಾರ ಕಾರ್ಕಳದ ಬಾಸಿಲಿಕಾದಲ್ಲಿ ಜರಗಿತು.
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆಯಲ್ಲಿ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಲಾಯಿತು. ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತದ ಧರ್ಮ ಗುರುಗಳು ಹಾಗೂ ಸಾವಿರಕ್ಕೂ ಅಧಿಕ ಸಂಖ್ಯೆ ಭಕ್ತಾಧಿಗಳು ಭಾಗ ವಹಿಸಿದ್ದರು.
ಪವಿತ್ರ ಬಲಿಪೂಜೆಯ ಬಳಿಕ ಪಾಲಕರ ಮಹೋತ್ಸವದ ಪ್ರಯಕ್ತ ನಡೆಯುವ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಲಾಯಿತು. ಇದೆ ವೇಳೆ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ನಂತರ ಸಾಮೂಹಿಕ ಸಹಭೋಜನವನ್ನು ಭ್ರಾತ್ವತ್ವದ ಸಂಕೇತವಾಗಿ ವಿತರಿಸಲಾಯಿತು.
ಉಡುಪಿ ಧರ್ಮಪ್ರಾಂತದ ಶಿಕ್ಷಣ ಆಯೋಗದ ಕಾರ್ಯದರ್ಶಿ ವಂ.ಡಾ ಲೋರೆನ್ಸ್ ಡಿಸೋಜ, ಬಾಸಿಲಿಕಾದ ರೆಕ್ಟರ್ ವಂ.ಜೋರ್ಜ್ ಡಿಸೋಜ, ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ.ಸ್ಟ್ಯಾನಿ ಬಿ.ಲೋಬೊ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ.ಜೋಸ್ವಿ ಫೆರ್ನಾಂಡಿಸ್, ಬಾಸಿಲಿಕಾದ ಸಹಾಯಕ ಧರ್ಮಗುರು ವಂ.ಜಾನ್ಸಿಲ್ ಆಲ್ವಾ ಉಪಸ್ಥಿತರಿದ್ದರು.







