"ಇಲ್ಲಿ ಆಗದ ಮನೆ ದುಬೈಯಲ್ಲಿ ಸಿಕ್ಕಿದ್ದು ದೇವರ ದಯೆಯಿಂದ'
ದುಬೈಯಲ್ಲಿ 87 ಲಕ್ಷದ ಮನೆ ಗೆದ್ದ ಉಬೈದುಲ್ಲಾರ ತಂದೆ ಬಿ.ಕೆ. ಅಬ್ದುಲ್ಲಾ

ಪುತ್ತೂರು, ಆ.1: "ಊರಿನಲ್ಲಿ ಮನೆ ನಿರ್ಮಿಸಲು ಕಷ್ಟವಾಗಿರುವ ಇಂದಿನ ಕಾಲದಲ್ಲಿ ಪುತ್ರನಿಗೆ ದುಬೈಯಲ್ಲಿ 87 ಲಕ್ಷ ರೂ. ಮೌಲ್ಯದ ಮನೆ ಸಿಕ್ಕಿರುವುದು ದೇವರ ದಯೆಯಿಂದ". ಈ ಮಾತುಗಳನ್ನು ಹೇಳಿದ್ದು ಯುಎಇ ಎಕ್ಸ್ ಚೇಂಜ್ ಪ್ರಮೋಷನ್ ನಲ್ಲಿ ಬಂಪರ್ ಬಹುಮಾನ ಗೆದ್ದ ಮೂಲತಃ ನೇರಳಕಟ್ಟೆಯ ನಿವಾಸಿ ಉಬೈದುಲ್ಲಾರ ತಂದೆ ಬಿ.ಕೆ. ಅಬ್ದುಲ್ಲಾ.
ಪುತ್ತೂರಿನ ಪರ್ಲಡ್ಕದ ನಿವಾಸಿಗಳಾಗಿರುವ ಅಬ್ದುಲ್ಲಾ ಮತ್ತು ಜಮೀಲಾ ದಂಪತಿ ತಮ್ಮ ಪುತ್ರ ಉಬೈದುಲ್ಲಾ ಯುಎಇ ಎಕ್ಸ್ ಚೇಂಜ್ ನಿಂದ 87 ಲಕ್ಷ ರೂ. ಮೌಲ್ಯದ ಮನೆಯನ್ನು ಬಹುಮಾನವಾಗಿ ಪಡೆದಿರುವುದರಿಂದ ಸಂತಸಗೊಂಡಿದ್ದಾರೆ. "ಮಗನಿಗೆ ಬಹುಮಾನ ಬಂದಿರುವುದರಿಂದ ನಮ್ಮ ಕುಟುಂಬ ಹಾಗೂ ನೆರೆಹೊರೆಯವರಿಗೆ ಸಂತೋಷವಾಗಿದೆ. ಎಲ್ಲವೂ ಅಲ್ಲಾಹನ ಅನುಗ್ರಹ. ನನಗೆ ಐವರು ಮಕ್ಕಳು. ಈ ಪೈಕಿ ಓರ್ವ ಮಗಳಿಗೆ ಮದುವೆ ಮಾಡಿಸಿದ್ದೇನೆ. ಇನ್ನಿಬ್ಬರು ಇದ್ದು, ಒಬ್ಬಾಕೆ ಪರ್ಲಡ್ಕ ಶರೀಅತ್ ಕಾಲೇಜಿನಲ್ಲಿ ಕಲಿಯುತ್ತಿರುವುದರಿಂದ ಇಲ್ಲೇ ಮನೆ ಮಾಡಿದ್ದೇವೆ. ಇನ್ನೋರ್ವ ಪುತ್ರಿ 4ನೆ ತರಗತಿಯಲ್ಲಿ ಕಲಿಯುತ್ತಿದ್ದು, ಒಬ್ಬ ಪುತ್ರ ಊರಿನಲ್ಲಿದ್ದಾನೆ. ಉಬೈದುಲ್ಲಾ 8 ವರ್ಷಗಳಿಂದ ದುಬೈಯಲ್ಲಿದ್ದು, ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದ. ಕೊನೆಗೂ ಆತನ ಕನಸು ನನಸಾಗಿದೆ. ನಾನು ಸಣ್ಣ ಪುಟ್ಟ ವ್ಯವಹಾರ ಮಾಡಿ ಕುಟುಂಬವನ್ನು ಸಲಹುತ್ತಿದ್ದೆ. ಇದೀಗ ಮಗನಿಗೆ ಭಾರೀ ಬಹುಮಾನ ಸಿಕ್ಕಿರುವುದು ಎಲ್ಲರ ಪ್ರಾರ್ಥನೆಯಿಂದಾಗಿದೆ ಎಂದವರು ಹೇಳಿದರು.
ಭಾರೀ ಬಹುಮಾನ ನೀಡಿ ನನ್ನಂತಹ ಬಡವನಿಗೆ ನೆರವಾದ ಯುಎಇ ಎಕ್ಸ್ ಚೇಂಜ್ ನ ಆಡಳಿತ ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.





