ದೋಣಿಗೆ ಅಪ್ಪಳಿಸಿದ ಅಲೆ: ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಕುಂದಾಪುರ, ಆ.1: ಸಮುದ್ರ ಅಲೆಯೊಂದು ಅಪ್ಪಳಿಸಿದ ಪರಿಣಾಮ ನಾಡ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ 10:30ರ ಸುಮಾರಿಗೆ ಕುಂಭಾಶಿ ಗ್ರಾಮದ ಕೊರವಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಉಡುಪಿ ಕಲ್ಯಾಣಪುರ ಸಂತೆಕಟ್ಟೆಯ ಜಯ ಕುಂದರ್(44) ಎಂದು ಗುರುತಿಸಲಾಗಿದೆ.
ಇವರು ಇಂದು ಬೆಳಗ್ಗೆ ಜಲದುರ್ಗಾ ದೋಣಿ ಯಲ್ಲಿ ನಾರಾಯಣ ಕುಂದರ್ ಹಾಗೂ ಲವ ಕಾಂಚನ್ ಎಂಬವರೊಂದಿಗೆ ಮೀನುಗಾರಿಕೆಗೆಂದು ಮಲ್ಪೆಯಿಂದ ಹೊರಟಿದ್ದರು. ಕೊರವಡಿ ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆಯನ್ನು ಬೀಸುವಾಗ ಸಮುದ್ರದ ಅಲೆಯೊಂದು ದೋಣಿಗೆ ಅಪ್ಪಳಿಸಿತು ಎನ್ನಲಾಗಿದೆ.
ಇದರ ಪರಿಣಾಮ ದೋಣಿ ಅಲುಗಾಡಿ ದೋಣಿಯಲ್ಲಿದ್ದ ಜಯ ಕುಂದರ್ ಆಯತಪ್ಪಿ ನೀರಿಗೆ ಬಿದ್ದು ಮುಳುಗಿ ಉಸಿರುಗಟ್ಟಿ ಮೃತಪಟ್ಟರು. ದೋಣಿ ಯಲ್ಲಿದ್ದ ಉಳಿದ ಇಬ್ಬರು ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ, ಕಡಲಿನ ಅಬ್ಬರ ತೀವ್ರವಾಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಬಳಿಕ ದೋಣಿಯನ್ನು ಸಮುದ್ರದಲ್ಲೇ ಮಧ್ಯಾಹ್ನ ಒಂದು ಗಂಟೆಯವರೆಗೆ ನಿಲ್ಲಿಸಿ, ನಂತರ ಮಲ್ಪೆಗೆ ಕಳುಹಿಸಿಕೊಡಲಾಯಿತು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







