ಕೆರೆಗಳ ಡಿನೋಟಿಫಿಕೇಷನ್‌ಗೆ ಸರಕಾರದ ಯತ್ನ: ರಾಜ್ಯಪಾಲರಿಗೆ ಕುಮಾರಸ್ವಾಮಿ ಪತ್ರ
‘

ಬೆಂಗಳೂರು, ಆ.1: ಸರಕಾರವು ರಾಜ್ಯಾದ್ಯಂತ ಸುಮಾರು 1500 ನಿರ್ಜೀವ ಕೆರೆಗಳನ್ನು ಡಿನೋಟಿಫಿಕೇಷನ್ ಮಾಡಲು ಮುಂದಾಗುತ್ತಿರುವ ಕ್ರಮಕ್ಕೆ ಅವಕಾಶ ಕಲ್ಪಿಸದಂತೆ ರಾಜ್ಯಪಾಲ ವಜುಭಾಯಿ ವಾಲಾಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿಗೂ ತೊಂದರೆ ಎದುರಾಗಿದ್ದು, ರೈತರ ಬೆಳೆಗಳಿಗೂ ನೀರು ಸಿಗುತ್ತಿಲ್ಲ. ಜನಸಾಮಾನ್ಯರು ನೀರಿಗಾಗಿ ಅಂತರ್ಜಲ ಹಾಗೂ ಕೆರೆಗಳನ್ನೆ ನಂಬಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ವಿವಿಧ ಜಿಲ್ಲಾ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಕೆರೆಗಳಿವೆ. ಈ ಪೈಕಿ ರಾಜ್ಯ ಸರಕಾರವು 1500ಕ್ಕೂ ಹೆಚ್ಚು ಕೆರೆಗಳನ್ನು ಡಿನೋಟಿಫೈ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿದೆ. ಅಲ್ಲದೆ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 68ಕ್ಕೆ ಇದೇ ಕಾರಣಕ್ಕಾಗಿ ತಿದ್ದುಪಡಿ ತರಲು ಮುಂದಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯು ಕಾನೂನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ, ಸಣ್ಣ ನೀರಾವರಿ, ಜಲಸಂಪನ್ಮೂಲ, ಅರಣ್ಯ, ಪರಿಸರ ಇಲಾಖೆಗೂ ಕಳುಹಿಸಿಕೊಟ್ಟಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹೊರತುಪಡಿಸಿ ಎಲ್ಲ ಇಲಾಖೆಗಳು ಒಂದು ವಾರದೊಳಗೆ ಸಹಮತ ವ್ಯಕ್ತಪಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಸರಕಾರವು ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡಕ್ಕೆ ಮಣಿದು, ಪರಿಸರ, ರೈತ ಹಾಗೂ ಸಮಾಜ ವಿರೋಧಿಯಾದ ಈ ನಿರ್ಧಾರ ಕೈಗೊಂಡಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಪ್ರಸ್ತಾವನೆ ಜಾರಿಗೆ ಬಂದಲ್ಲಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕೆರೆಗಳ ಅಸ್ತಿತ್ವವನ್ನು ನಾಶ ಮಾಡುವ ಆತಂಕ ಎದುರಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
1985ರ ಜೂ.26ರಂದು ಜನತಾ ಪಕ್ಷದ ಸರಕಾರದಲ್ಲಿ ಎಚ್.ಡಿ.ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಕೆರೆಗಳ ಸಂರಕ್ಷಣೆ ಹಾಗೂ ಕೆರೆ ಅಂಗಳ ಒತ್ತುವರಿ ಸಂಬಂಧ ವರದಿ ನೀಡುವಂತೆ ನಿವೃತ್ತ ಐಎಎಸ್ ಅಧಿಕಾರಿ ಎನ್.ಲಕ್ಷ್ಮಣ ರಾವ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು. ಸರಕಾರವು ಯಾವುದೆ ಕಾರಣಕ್ಕೂ ಕೆರೆ ಭೂಮಿಯಲ್ಲಿ ವಾಣಿಜ್ಯ ಅಥವಾ ವಸತಿ ಉದ್ದೇಶದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಸಮಿತಿ ಶಿಫಾರಸ್ಸು ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ನಿರ್ಜೀವವಾಗಿರುವ ಕೆರೆಗಳನ್ನು ಉದ್ಯಾನವನ ಅಥವಾ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೂ, ನಗರದ ಮತ್ತಿಕೆರೆಯಲ್ಲಿ 41 ಹೆಕ್ಟೇರ್ ಕೆರೆ ಭೂಮಿಯನ್ನು ಖಾಸಗಿ ಬಡಾವಣೆ ನಿರ್ಮಿಸಲು ನೀಡಲಾಗಿತ್ತು. ಇದೇ ರೀತಿಯ ಹಲವಾರು ಪ್ರಕರಣಗಳು ನಗರ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ನಡೆದಿವೆ ಎಂದು ಅವರು ದೂರಿದರು.ಕೆರೆಯ ಭೂಮಿಯನ್ನು ಯಾವುದೆ ಪ್ರಾಧಿಕಾರಕ್ಕೆ ಮಂಜೂರು ಮಾಡಬಾರದು ರಾಜ್ಯ ಹೈಕೋರ್ಟ್ 1995ರಲ್ಲಿ ಆದೇಶ ನೀಡಿತ್ತು. ಅಲ್ಲದೆ, 2006ರಲ್ಲಿ ಸುಪ್ರೀಂಕೋರ್ಟ್ ಸಹ ಸರಕಾರ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.
2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿಯು ತನ್ನ ಎರಡು ಮಧ್ಯಂತರ ವರದಿಗಳಲ್ಲಿ ಕ್ರಮವಾಗಿ 13,614.37 ಹಾಗೂ 27,336.09 ಎಕರೆ ಭೂಮಿ ಬೆಂಗಳೂರಿನಲ್ಲಿ ಒತ್ತುವರಿಯಾಗಿರುವುದಾಗಿ ತಿಳಿಸಿತ್ತು. 2011ರ ಜು.4ರಂದು ವಿ.ಬಾಲಸುಬ್ರಹ್ಮಣ್ಯಂ ನೇತೃತ್ವದ ಸಮಿತಿಯು ಸರಕಾರಕ್ಕೆ ನೀಡಿರುವ ವರದಿಯಲ್ಲಿ 11,07,187 ಎಕರೆ(ಕಂದಾಯ ಇಲಾಖೆಗೆ ಸೇರಿದ 9,23,781 ಎಕರೆ, ಅರಣ್ಯ ಇಲಾಖೆಗೆ ಸೇರಿದ 1,65,796 ಎಕರೆ ಹಾಗೂ ಇತರೆ ಇಲಾಖೆಗಳಿಗೆ ಸೇರಿದ 17,610 ಎಕರೆ) ಭೂಮಿ ಒತ್ತುವರಿಯಾಗಿರುವುದಾಗಿ ತಿಳಿಸಿದೆ ಎಂದು ಅವರು ಹೇಳಿದ್ದಾರೆ.







