ಆ.6: 'ದಿ 3 ಹಂಗ್ರಿ ಮೆನ್'ನಿಂದ ಸಿಝ್ಲರ್ ತಿನ್ನುವ ಸ್ಪರ್ಧೆ

ಮಂಗಳೂರು, ಆ.1: ವಿವಿಧ ಹೋಟೆಲ್‌ಗಳಲ್ಲಿ ಆಹಾರಗಳ ಬಗ್ಗೆ ಖಾದ್ಯ ಪ್ರಿಯರಿಗೆ ಮಾಹಿತಿಗಳನ್ನು ಒದಗಿಸುತ್ತಿರುವ, ಏಷ್ಯಾದ ಪ್ರಮುಖ ಡೈನಿಂಗ್ ಗೈಡ್ ಆಗಿರುವ ‘ದಿ 3 ಹಂಗ್ರಿ ಮೆನ್’ ಈ ವರ್ಷವೂ ಮಂಗಳೂರಿಗರಿಗಾಗಿ ‘ಮ್ಯಾನ್ ವರ್ಸಸ್ ಸಿಝ್ಲರ್ 2’ ಹೆಸರಿನಲ್ಲಿ ಸಿಝ್ಲರ್‌ಗಳನ್ನು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಿದೆ. ಆ.6ರಂದು ಮಧ್ಯಾಹ್ನ ಮೂರು ಗಂಟೆಯಿಂದ ನಡೆಯಲಿರುವ ಈ ಸಿಝ್ಲರ್ ಈಟಿಂಗ್ ಚಾಂಪಿಯನ್‌ಶಿಪ್ ನಗರದ ಕೋಬೆ ಸಿಝ್ಲರ್ಸ್‌ನ ಸಹಭಾಗಿತ್ವದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇರಲಿದ್ದು, 500 ರೂ.ಪ್ರವೇಶ ಶುಲ್ಕವನ್ನು ನಿಗದಿಗೊಳಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ ಸ್ಪರ್ಧೆ ಮುಗಿದ ಬಳಿಕ ಬಳಸಿಕೊಳ್ಳಲು 600 ರೂ. ಮೌಲ್ಯದ ಕೋಬೆ ಫುಡ್ ಒಚರ್ ಸಿಗಲಿದೆ.
ಕೇವಲ 30 ತಂಡಗಳಿಗೆ ಮಾತ್ರ ಅವಕಾಶವಿದ್ದು, ಕೆಲವು ಸ್ಪಾಟ್ ಎಂಟ್ರಿಗಳನ್ನೂ ನೀಡಲಾಗುವುದು ಎಂದು ದಿ 3 ಹಂಗ್ರಿ ಮೆನ್‌ನ ಸಹಸ್ಥಾಪಕ ನಿಖಿಲ್ ಪೈ ತಿಳಿಸಿದರು. ತಮ್ಮ ತಂಡದ ಎಂಟನೇ ವರ್ಷಾಚರಣೆಯ ಅಂಗವಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅತ್ಯಂತ ವೇಗವಾಗಿ ಸಿಝ್ಲರ್‌ಗಳನ್ನು ತಿನ್ನುವ ಈ ಸ್ಪರ್ಧೆಯಲ್ಲಿ ವಿಜೇತ ತಂಡವು ಒಂದು ತಿಂಗಳ ಕಾಲ ಉಚಿತವಾಗಿ ಸಿಝ್ಲರ್‌ಗಳನ್ನು ತಿನ್ನುವ ಅವಕಾಶ ಪಡೆಯಲಿದೆ. ಅಲ್ಲದೆ ವೀರಾಸ್ ಯುನಿಸೆಕ್ಸ್ ಫ್ಯಾಮಿಲಿ ಸಲೂನ್‌ನಿಂದ 13,000 ರೂ.ವೌಲ್ಯದ ಮೇಕ್ ಓವರ್ ವೋಚರ್ ದೊರೆಯಲಿದೆ. ಜೊತೆಗೆ ಎವೆರಿಡೇ ಸೂಪರ್ ಮಾರ್ಕೆಟ್ ಮತ್ತು ಫಾರ್ಮ್ ಬ್ಯಾಗ್‌ನಿಂದ ವಿವಿಧ ಹ್ಯಾಂಪರ್‌ಗಳು ಮತ್ತು ವೋಚರ್‌ಗಳು ಸಿಗಲಿವೆ. ಇಡೀ ವಿಶ್ವದಲಿಯೇ ನಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಇಂತಹ ಸ್ಪರ್ಧೆಯನ್ನು ಏರ್ಪಡಿಸಿಲ್ಲ ಎಂದು ಕಾಲಿನ್ ಡಿಸೋಜಾ ತಿಳಿಸಿದರು.
ಈ ವರ್ಷದ ಸ್ಪರ್ಧೆಗಾಗಿ 'ದಿ 3 ಹಂಗ್ರಿ ಮೆನ್' ಜೊತೆ ಕೈಜೋಡಿಸಿರುವುದು ಸಂತಸ ತಂದಿದೆ ಎಂದು ಕೋಬೆ ಸಿಝ್ಲರ್ಸ್‌ನ ಪಾಲುದಾರ ಹಾರಿಸ್ ಇಬ್ರಾಹಿಂ ಹೇಳಿದರು.
ಮೊದಲು ಬಂದವರಿಗೆ ಮೊದಲು ಪ್ರವೇಶ ನೀಡಲಾಗುತ್ತಿದ್ದು, 18 ವರ್ಷ ಮತ್ತು ಮೇಲ್ಪಟ್ಟ ವಯೋಮಾನದವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.







