ತವರಿನಲ್ಲಿ 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿರುವ ಭಾರತ
ಭಾರತಕ್ಕೆ ಸರಣಿಯನ್ನಾಡಲು ಆಗಮಿಸಲಿರುವ ಆಸ್ಟ್ರೇಲಿಯ, ನ್ಯೂಝಿಲೆಂಡ್, ಶ್ರೀಲಂಕಾ

ಕೋಲ್ಕತಾ,ಆ.1: ಮುಂದಿನ ಸೆಪ್ಟಂಬರ್‌ನಿಂದ ಡಿಸೆಂಬರ್ ತನಕ ಟೀಮ್ ಇಂಡಿಯಾ ಸ್ವದೇಶದಲ್ಲಿ ಮೂರು ಸರಣಿಗಳಲ್ಲಿ 23 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರವಾಸ ಮತ್ತು ವೇಳಾಪಟ್ಟಿಯ ಸಭೆಯಲ್ಲಿ ಇಂದು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಪಂದ್ಯಗಳ ದಿನಾಂಕವನ್ನು ಪ್ರಕಟಿಸಲಾಗಿಲ್ಲ. ಭಾರತ ಆಡಲಿರುವ ಸರಣಿಗಳ ಬಗ್ಗೆ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದರು.
ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಐದು ಏಕದಿನ ಪಂದ್ಯಗಳು ನಿಗದಿಯಾಗಿವೆ. ಚೆನ್ನೈ ,ಬೆಂಗಳೂರು ,ನಾಗ್ಪುರ , ಇಂದೋರ್ ಮತ್ತು ಕೋಲ್ಕತಾದಲ್ಲಿ ನಡೆಯಲಿವೆ.
ಆಸ್ಟ್ರೇಲಿಯ ವಿರುದ್ಧ ಮೂರು ಟ್ವೆಂಟಿ-20 ಪಂದ್ಯಗಳು ಹೈದರಾಬಾದ್, ರಾಂಚಿ ಮತ್ತು ಗುವಾಹತಿಯಲ್ಲಿ ನಿಗದಿಯಾಗಿದೆ. ನ್ಯೂಝಿಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಅಕ್ಟೋಬರ್ ಮಧ್ಯದಲ್ಲಿ ಆರಂಭವಾಗಲಿದೆ. ಪುಣೆ, ಮುಂಬೈ ಮತ್ತು ಕಾನ್ಪುರದಲ್ಲಿ 3 ಏಕದಿನ ಪಂದ್ಯಗಳು. ದಿಲ್ಲಿ, ಕಟಕ್ ಮತ್ತು ರಾಜ್‌ಕೋಟ್‌ನಲ್ಲಿ ಮೂರು ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಆಯೋಜಿಸಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿ ನವೆಂಬರ್‌ನಲ್ಲಿ ನಡೆಯಲಿದೆ. 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೋಲ್ಕತಾದಲ್ಲಿ ಮೊದಲ ಟೆಸ್ಟ್, ನಾಗ್ಪುರದಲ್ಲಿ ಎರಡನೆ ಟೆಸ್ಟ್, ಮೂರನೆ ಟೆಸ್ಟ್ ಪಂದ್ಯ ಹೊಸದಿಲ್ಲಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಲಂಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ಧರ್ಮಶಾಲಾ, ಮೊಹಾಲಿ ಮತ್ತು ವಿಶಾಖಪಟ್ಟಣದಲ್ಲಿ ನಡೆಯಲಿದೆ . ಮೂರು ಟ್ವೆಂಟಿ-20 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಕೊಚ್ಚಿ ಅಥವಾ ನೂತನವಾಗಿ ನಿರ್ಮಾಣಗೊಂಡ ತಿರುವನಂತಪುರದ ಕ್ರೀಡಾಂಗಣದಲ್ಲಿ , ಇಂದೋರ್ ಮತ್ತು ಮುಂಬೈನಲ್ಲಿ ಆಯೋಜಿಸಲಾಗುವುದು ಎಂದು ಅಮಿತಾಭ್ ಚೌಧರಿ ತಿಳಿಸಿದ್ದಾರೆ.
2018ರ ಮಾರ್ಚ್‌ನಲ್ಲಿ ಶ್ರೀಲಂಕಾ ಇಂಡಿಪೆಂಡೆನ್ಸ್ ಕಪ್ ಟೂರ್ನಮೆಂಟ್ ಆಯೋಜಿಸಲಿದೆ. ಇದಕ್ಕೂ ಮೊದಲು ಭಾರತ ತಂಡವು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿದೆ.
ಈಡನ್‌ಗಾರ್ಡನ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ನ.16ರಂದು ಆರಂಭಗೊಳ್ಳಲಿದೆ ಎಂದು ಸಿಎಬಿ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ.







