ಅಮೆರಿಕದಲ್ಲಿ 2 ವರ್ಷಗಳ ಬಳಿಕ ಆಡಿದ ಮರಿಯಾ ಶರಪೋವಾ
ಮೊದಲ ಪಂದ್ಯದಲ್ಲಿ ಗೆಲುವು

ಲಾಸ್‌ಏಂಜಲೀಸ್, ಆ.1: ಐದು ಬಾರಿ ಗ್ರಾನ್ ಸ್ಲಾಮ್ ಜಯಿಸಿರುವ ರಷ್ಯಾದ ಮಾಜಿ ನಂ.1 ತಾರೆ ಮರಿಯಾ ಶರಪೋವಾ ಅಮೆರಿಕದಲ್ಲಿ ಎರಡು ವರ್ಷಗಳ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ.
ದಿ ಬ್ಯಾಂಕ್ ಸ್ಟಾನ್‌ಫೋರ್ಡ್ಸ್ ಬ್ಯಾಂಕ್ ಆಫ್ ವೆಸ್ಟ್ ಕ್ಲಾಸಿಕ್‌ನ ಮೊದಲ ಪಂದ್ಯದಲ್ಲಿ ಶರಪೋವಾ ಅವರು ಅಮೆರಿಕದ ಜೆನ್ನಿಫರ್ ಬ್ರಾಡಿ ವಿರುದ್ಧ 6-1, 4-6, 6-0 ಅಂತರದಲ್ಲಿ ಜಯ ಗಳಿಸಿ ಎರಡನೆ ಸುತ್ತು ಪ್ರವೇಶಿಸಿದರು. ಎರಡನೆ ಸುತ್ತಿನಲ್ಲಿ ಶರಪೋವಾ ಅವರು ಉಕ್ರೈನ್‌ನ ಲೆಸಿಯಾ ಸುರೆಂಕೊರನ್ನು ಎದುರಿಸುವರು.
30ರ ಹರೆಯದ ಶರಪೋವಾ ಮಾರ್ಚ್ 2015ರ ಬಳಿಕ ಮೊದಲ ಬಾರಿ ಅಮೆರಿಕದಲ್ಲಿ ಆಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಅವರಿಗೆ ಅಮೆರಿಕದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಮಹಿಳೆಯರ ಟೆನಿಸ್ ವಿಶ್ವ ರ್ಯಾಂಕಿಂಗ್‌ನಲ್ಲಿ 171ನೆ ಸ್ಥಾನ ಪಡೆದಿರುವ ಶರಪೋವಾ ಅವರು ಫ್ರೆಂಚ್ ಓಪನ್‌ನಲ್ಲಿ ಆಡಲು ವೈಲ್ಡ್ ಕಾರ್ಡ್ ಸಿಕ್ಕಿರಲಿಲ್ಲ. ವಿಂಬಲ್ಡನ್‌ನ ಅರ್ಹತಾ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಆಡಿರಲಿಲ್ಲ.
ಆಗಸ್ಟ್ 28ರಂದು ಆರಂಭವಾಗಲಿರುವ ಯುಎಸ್ ಓಪನ್‌ನಲ್ಲಿ ಸ್ಥಾನ ಪಡೆಯಬೇಕಾದರೆ ಶರಪೋವಾ ಅವರು ಯುಎಸ್ ಟೆನಿಸ್ ಅಸೋಸಿಯೇಶನ್‌ನಿಂದ ವೈಲ್ಡ್ ಕಾರ್ಡ್ ಪಡೆಯಬೇಕಾಗಿದೆ.
ಶರಪೋವಾ ಡೋಪಿಂಗ್ ಆರೋಪದಲ್ಲಿ 15 ತಿಂಗಳ ನಿಷೇಧದ ಸಜೆ ಅನುಭವಿಸಿದ್ದರು.ಕಳೆದ ಎಪ್ರಿಲ್‌ನಲ್ಲಿ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗಿ ಮೂರು ಟೂರ್ನಮೆಂಟ್‌ಗಳಲ್ಲಿ ಆಡಿದ್ದರು. ಆದರೆ ಗಾಯದ ಕಾರಣದಿಂದಾಗಿ ವಿಂಬಲ್ಡನ್‌ನಲ್ಲಿ ಆಡಿರಲಿಲ್ಲ.







