ವೀರಶೈವ - ಲಿಂಗಾಯಿತ ಧರ್ಮ ಶಿಫಾರಸ್ಸಿಗೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ, ಆ. 2: ವೀರಶೈವ - ಲಿಂಗಾಯಿತ ಧರ್ಮವೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶಿವಮೊಗ್ಗ ನಗರ ವೀರಶೈವ - ಲಿಂಗಾಯಿತ ಸಮುದಾಯವು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
ಕಳೆದ ಜಾತಿ ಗಣತಿ ಸಂದರ್ಭದಲ್ಲಿ ರಾಜ್ಯದ ಸಮುದಾಯದ ಮಠಾಧೀಶರು, ಮುಖಂಡರು, ವೀರಶೈವ ಮಹಾಸಭೆಯು ಚರ್ಚಿಸಿ ಸರ್ಕಾರದ ಸೌಲಭ್ಯ ಪಡೆಯಲು ವೀರಶೈವ - ಲಿಂಗಾಯಿತ ಸಮುದಾಯವನ್ನು ಸ್ವತಂತ್ರ ಧರ್ಮವೆಂದು ಮಾನ್ಯ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇತ್ತೀಚೆಗೆ ಕೆಲ ಸ್ಥಾಪಿತ ಹಿತಾಸಕ್ತಿಗಳು ವೀರಶೈವ ಧರ್ಮವೇ ಇಲ್ಲ. ಇರುವುದು ಲಿಂಗಾಯಿತ ಧರ್ಮ ಮಾತ್ರವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಜೊತೆಗೆ ವೀರಶೈವ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಕೂಡ ನೀಡುತ್ತಿರುವುದು ಖಂಡನಾರ್ಹವಾದುದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಂಭಾಪುರಿ ಸ್ವಾಮೀಜಿಗಳು ಹಾಗೂ ವೀರಶೈವ ಪರಂಪರೆಯ ಬಗ್ಗೆ ಬಸವ ದಳದ ಮಾತೆ ಮಹಾದೇವಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕುರಿತಂತೆ ತಕ್ಷಣವೇ ಮಾತೆ ಮಹಾದೇವಿಯವರು ರಂಭಾಪುರಿ ಸ್ವಾಮೀಜಿಗಳ ಕ್ಷಮೆಯಾಚನೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸರ್ಕಾರವು ಸ್ವತಂತ್ರ ಧರ್ಮ ಸ್ಥಾಪನೆಗೆ ಶಿಫಾರಸ್ಸು ಮಾಡುವುದಾದರೆ ವೀರಶೈವ - ಲಿಂಗಾಯಿತ ಧರ್ಮವೆಂದು ಶಿಫಾರಸ್ಸು ಮಾಡಬೇಕು. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು







