ಸಾಕಣೆಗಾಗಿ ಆಡಿನ ಮರಿ ವಿತರಣೆ : ಆಸಕ್ತರಿಂದ ಅರ್ಜಿ ಆಹ್ವಾನ
ಮಂಗಳೂರು,ಆ.2: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಸಾಕಣೆಗಾಗಿ ಆಡಿನ ಮರಿಯನ್ನು ವಿತರಿಸಲಾಗುತ್ತಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತೀ ಕುಟುಂಬಕ್ಕೆ ಸಾಕಲು ಹೆಣ್ಣು ಆಡಿನ ಮರಿಯೊಂದನ್ನು ಉಚಿತವಾಗಿ ನೀಡಲಾಗುವುದು.
ಸದರಿ ಆಡಿನ ಮರಿಯಿಂದ ಉಂಟಾಗುವ ಮೊದಲ ಹೆಣ್ಣು ಮರಿಯನ್ನು ಮಾತ್ರ ಸಂಸ್ಥೆಗೆ ಕೊಡಬೇಕಾಗುತ್ತದೆ. ಈಗಾಗಲೇ 27 ಕುಟುಂಬಗಳು ಸದರಿ ಯೋಜನೆಯ ಪ್ರಯೋಜನವನ್ನು ಪಡೆದು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಜನರು ಸ್ವ ಉದ್ಯೋಗದ ಮೂಲಕ ಸ್ವಾವಲಂಬನೆಯನ್ನು ಗಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿಧವೆಯರು, ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.08.2017.
ಆಡು ಸಾಕಣೆ ಒಂದು ಲಾಭದಾಯಕ ಉದ್ಯೋಗವಾಗಿದ್ದು ಆಸಕ್ತರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಮುಹಮ್ಮದ್ ಯು.ಬಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ, ಮೊಬೈಲ್ ಸಂಖ್ಯೆ: 8951517480 ನ್ನು ಸಂಪರ್ಕಿಸಬಹುದು.





