ಟೌನ್ ಕೋಆಪರೇಟೀವ್ ಸೊಸೈಟಿಗೆ ನೂರು ವರ್ಷದ ಇತಿಹಾಸವಿದೆ: ರಾಜಣ್ಣಶೆಟ್ಟಿ

ಚಿಕ್ಕಮಗಳೂರು, ಆ.2: ಟೌನ್ ಕೋಆಪರೇಟೀವ್ ಸೊಸೈಟಿಗೆ ನೂರು ವರ್ಷದ ಇತಿಹಾಸವಿದ್ದು, ಈ ಸಂಸ್ಥೆ ಕೆಲವೆ ಸದಸ್ಯರೊಂದಿಗೆ ಆರಂಭವಾಗಿ ಈಗ 5 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ 5 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ ಎಂದು ಟೌನ್ ಕೋ ಆಪರೇಟೀವ್ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ರಾಜಣ್ಣಶೆಟ್ಟಿ ಹೇಳಿದರು.
ಅವರು ಬುಧವಾರ ನಗರದ ಟೌನ್ ಕೋಆಪರೆಟೀವ್ ಸಹಕಾರ ಸಂಘದಲ್ಲಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಂದಾನದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೊದಲು ಮಾತನಾಡಿದರು. ಇಂತಹ ಸಂಸ್ಥೆಯಲ್ಲಿ ಅಧಿಕಾರಕ್ಕಾಗಿ ಸಂಘದಲ್ಲಿ ಬಿನ್ನಾಭಿಪ್ರಾಯ ಮೂಡಬಾರದು ಎಂಬ ದೃಷ್ಟಿಯಿಂದ ಸಂದಾನ ಸಭೆಯಲ್ಲಿ ರಾಜೀನಾಮೆ ನೀಡಿದ್ದೇನೆ. ಮುಂದೆ ಅಧಿಕಾರ ವಹಿಸಿಕೊಳ್ಳುವ ಯುವ ಸಮೂಹ ಸದಸ್ಯರಿಗೆ ಉತ್ತಮವಾಗಿ ಸ್ಪಂದಿಸಿ ಸಂಸ್ಥೆಯ ಏಲಿಗೆಗೆ ಶ್ರಮಿಸುವಂತೆ ಹೇಳಿದರು.
ವರಸಿದ್ದಿವೇಣುಗೋಪಾಲ್ ಮಾತನಾಡಿ, ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕಾದರೆ ಮೊದಲು ಎಲ್ಲಾ ಸದಸ್ಯರು ಒಗ್ಗೂಡಿ ಸಾಗಬೇಕಾದ ಅವಶ್ಯವಿದೆ. ಅಧ್ಯಕ್ಷಸ್ಥಾನ ಅಲಂಕರಿಸುವುದು ಮುಖ್ಯವಲ್ಲ ಸಂಸ್ಥೆಯಲ್ಲಿನ ಸದಸ್ಯರಿಗೆ ಅವಶ್ಯವಾದ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಪೂರೈಸಿ ಸಹಕರಿಸುವುದು ಅಗತ್ಯ ಎಂದರು.
ಅವಿಶ್ವಾಸ ನಿರ್ಣಯದ ಫಲಿತಾಂಶವನ್ನು ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಸೊಸೈಟಿಯ ಹಣಕಾಸು ವ್ಯವಹಾರಕ್ಕೆ ಅನಾನುಕೂಲ ವಾಗುವುದರಿಂದ ಸಾರ್ವಜನಿಕ ದೈನಂದಿನ ಚಟುವಟಿಗೆ ತೊಡಕಾಗುತ್ತದೆ. ಈ ಸಂಬಂದ ಅಧ್ಯಕ್ಷರೊಂದಿಗೆ ಉಪಾಧ್ಯಕ್ಷೆ ಜಯಂತಿ, ನಿರ್ಧೆಶಕರಾದ ಸಿ.ಆರ್.ಕೇಶವಮೂರ್ತಿ, ಮೊಗಣ್ಣ, ವರಸಿದ್ದಿವೇಣುಗೋಪಾಲ್ ಸಂದಾನ ಸಭೆ ನಡೆಸಿ ನಂತರ ನಿರ್ಧೇಶಕರೊಂದಿಗೆ ಚರ್ಚಿಸಿ ನ್ಯಾಯಾಲಯದಲ್ಲಿರುವ ಪ್ರಕರಣ ಹಿಂಪಡೆಯುವಂತೆ ರಾಜಣ್ಣಶೆಟ್ಟಿಗೆ ಮನವಿ ಮಾಡಿದಾಗ ಒಪ್ಪಿಗೆ ಸೂಚಿಸಿ ರಾಜೀನಾಮೆ ಸಲ್ಲಿಸಿದರು.
ಉಪಾಧ್ಯಕ್ಷೆ ಜಯಂತಿಯವರು ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಪತ್ರವನ್ನು ಸಹಕಾರ ಇಲಾಖೆಗೆ ಕಳುಹಿಸಿಕೊಡಲಾಗಿದೆ.
ನಿರ್ಧೇಶಕರಾದ ಗಿರಿಧರ್ ಯತೀಶ್, ಶ್ರೀನಿವಾಸ್, ಸಿ.ವಿ.ಕುಮಾರ್, ಗುರುಮೂರ್ತಿ, ಎ.ಆರ್.ಶರೀಫ್, ಅಂಬಿಕಾಮಹೇಶ್, ಕಾರ್ಯದರ್ಶಿ ಆಲೇಶ್ ಮತ್ತಿರರಿದ್ದರು.







