ಕೇರಳದಲ್ಲಿರುವ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನಕ್ಕೆ ವಿಶೇಷ ತಂಡ ನೇಮಕ
ಕಾಸರಗೋಡು,ಆ.02 : ಕೇರಳದಲ್ಲಿರುವ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ನೇಮಿಸಲಾಗಿದೆ.
ತಿರುವನಂತಪುರದಲ್ಲಿ ಮಂಗಳವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ಜರಗಿದ ರಾಜ್ಯ ಭಾಷಾ ಅಲ್ಪಸಂಖ್ಯಾತ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಭಾಷಾ ಅಲ್ಪಸಂಖ್ಯಾತರಿಗೆ ಪ್ಲಸ್‌ಟು ತನಕ ಅವರ ಮಾತೃಭಾಷೆಯಲ್ಲೇ ಪ್ರಶ್ನೆಪತ್ರಿಕೆಗಳನ್ನು ಪೂರೈಸಿ ಪರೀಕ್ಷೆಗೆ ಬರೆಯಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಭೆ ಆದೇಶ ನೀಡಿತು.
ಕೇರಳದ ಕನ್ನಡ ಮತ್ತು ತಮಿಳು ಭಾಷಿಗರಿಗೆ ಜಾತಿ ಪ್ರಮಾಣಪತ್ರ ಲಭಿಸುವಲ್ಲಿ ಎದುರಾಗುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಶಾಲೆಯಲ್ಲಿ ಮಲಯಾಳ ಭಾಷಾ ಕಲಿಕೆ ಕಡ್ಡಾಯಗೊಳಿಸಿರುವುದು ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿ ಮತ್ತು ಹಕ್ಕುಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು. ಈ ವಿಷಯದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ.
ಭಾಷಾ ಅಲ್ಪಸಂಖ್ಯಾತರು ಅವರದ್ದೇ ಮಾತೃಭಾಷೆಯಲ್ಲಿ ಕಲಿಕೆ ಮುಂದುವರಿಸಬಹುದು. ಅದರಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾಗುವುದಿಲ್ಲ್ಲ. ಮಾತೃ ಭಾಷೆ ಜತೆಗೆ ಮಲಯಾಳವನ್ನು ಉಪಭಾಷೆಯನ್ನಾಗಿ ಕಲಿಯಬೇಕೆಂದಷ್ಟೇ ನಿರ್ದೇಶಿಸಲಾಗಿದೆ. ಅದಕ್ಕೆ ಈ ಶೈಕ್ಷಣಿಕ ವರ್ಷದಿಂದ ಚಾಲನೆ ನೀಡಲಾಗಿದೆ.
ಕೇರಳದಲ್ಲಿ ಜನಿಸಿದ ಎಲ್ಲಾ ಮಕ್ಕಳು ಮಾತೃ ಭಾಷೆಯಾದ ಮಲಯಾಳ ಭಾಷಾ ಜ್ಞಾನವನ್ನು ಹೊಂದಿರಬೇಕೆಂದು ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು.
ಮಲಯಾಳದಲ್ಲಿ ಪ್ರಕಟಿಸಲಾಗುವ ಪಿಎಸ್‌ಸಿ ಮಾದರಿಯ ಪ್ರಶ್ನೆಗಳನ್ನು ಇನ್ನು ಇಂಗ್ಲಿಷ್‌ನಲ್ಲಿ ತಯಾರಿಸುವ ತೀರ್ಮಾನ ಕೈಗೊಳ್ಳಲಾಗಿದೆಯೆಂದು ಸಭೆಯಲ್ಲಿ ಭಾಗವಹಿಸಿದ ಪಿಎಸ್‌ಸಿ ಕಾರ್ಯದರ್ಶಿ ಸಾಜು ಜೋರ್ಜ್ ತಿಳಿಸಿದರು.
ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ತಾಲೂಕುಗಳಲ್ಲಿ ಆಯಾ ಪ್ರದೇಶದ ಅಲ್ಪಸಂಖ್ಯಾತ ಭಾಷೆ ಬಲ್ಲ ಅಧಿಕಾರಿಗಳನ್ನು ನೇಮಿಸುವ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದರು . ಕೆಎಸ್ ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಕ್ಕೆ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಿಯಾಯಿತಿ ಲಭಿಸುತ್ತಿಲ್ಲವೆಂಬ ದೂರುಗಳು ಲಭಿಸಿದ್ದು, ಅದಕ್ಕೆ ಕೆಎಸ್‌ಆರ್‌ಟಿಸಿ ಎಂ.ಡಿ ಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಸಭೆಯಲ್ಲಿ ವಿದ್ಯುತ್ ಖಾತೆ ಸಚಿವ ಎಂ.ಎಂ. ಮಣಿ, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಕೆ. ಕುಂಞಿರಾಮನ್, ಎಸ್. ರಾಜೇಂದ್ರನ್, ಆಡಳಿತ ಭಾಷಾ ಇಲಾಖೆ ಕಾರ್ಯದರ್ಶಿ ಮನೋಜ್ ಜೋಷಿ, ಸ್ಥಳೀಯಾಡಳಿತ ಖಾತೆ ಕಾರ್ಯದರ್ಶಿ ಎ. ಶಾಜಹಾನ್, ಸಾರ್ವಜನಿಕ ಶಿಕ್ಷಣ ಇಲಾಖಾ ನಿರ್ದೇಶಕ ಕೆ.ವಿಯ ಮೋಹನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







