ಸ್ತನ ಪಾನ ಮಾಡಿಸಿ ಶಿಶು ಮರಣ ತಪ್ಪಿಸಿ: ಡಾ.ಮಹೇಂದ್ರ ಕರೆ
ವಿಶ್ವ ಸ್ತನ ಪಾನ ಸಪ್ತಾಹಕ್ಕೆ ಚಾಲನೆ

ಮಡಿಕೇರಿ, ಆ.2: ಮಗುವನ್ನು ತಾಯಿಯ ಹಾಲಿನಿಂದ ವಂಚಿತರನ್ನಾಗಿ ಮಾಡದೆ ಸ್ತನ ಪಾನ ಮಾಡಿಸುವ ಮೂಲಕ ಶಿಶು ಮರಣವನ್ನು ತಡೆಗಟ್ಟಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಮಹೇಂದ್ರ ಅವರು ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಾರ್ಡ್‌ನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಸ್ತನ ಪಾನ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಪಂಚದಲ್ಲಿನ ಮೂರನೆಯ ಒಂದು ಭಾಗದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಒಂದರಿಂದ ಐದು ವರ್ಷದ ಶೇ.50 ರಷ್ಠು ಮಕ್ಕಳ ಮರಣಕ್ಕೆ ಅಪೌಷ್ಠಿಕತೆಯೇ ಕಾರಣವಾಗಿದೆ. ಮಗುವಿಗೆ ಮೊದಲ ಆರು ತಿಂಗಳು ಎದೆ ಹಾಲನ್ನು ಮಾತ್ರ ಕೊಡಬೇಕು. ಮಗು ಹುಟ್ಟಿದ ಅರ್ದ ಗಂಟೆಯೊಳಗೆ ಎದೆ ಹಾಲನ್ನು ಕೊಡಲು ಮುಂದಾಗಬೇಕು. ಇದರಿಂದ ಮಗುವಿಗೆ ಎಲ್ಲಾ ಪೌಷ್ಟಿಕಾಂಶ ದೊರೆತು ಆರೋಗ್ಯ ಜೀವನ ಪಡೆಯುತ್ತದೆ ಎಂದರು. ವಿಶ್ವ ಸ್ತನ ಪಾನ ಸಪ್ತಾಹವು ಆಗಸ್ಟ್ ಮೊದಲ ವಾರದಲ್ಲಿ ನಡೆಯುತ್ತಿದ್ದು, ಮಕ್ಕಳಿಗೆ ಎದೆ ಹಾಲಿನ ಪ್ರಾಮುಖ್ಯತೆ ಹಾಗೂ ಚಿಕ್ಕ ಮಕ್ಕಳ ಪೂರಕ ಪೌಷ್ಟಿಕ ಆಹಾರದ ಬಗ್ಗೆ ತಾಯಂದಿರಿಗೆ ತಿಳುವಳಿಗೆ ನೀಡುವಂತಾಗಬೇಕು. ಹೆಚ್ಚಿನದ್ದಾಗಿ ತಾಯಿ ಮತ್ತು ಮಗುವಿನ ಪೌಷ್ಟಿಕಾಂಶದ ಕೊರತೆಗೆ ಆರೋಗ್ಯ ಶಿಕ್ಷಣದ ಕೊರತೆ ಇರುತ್ತದೆ. ಆದ್ದರಿಂದ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು.
ಇತ್ತೀಚಿನ ಒತ್ತಡದ ಬದುಕಿನಲ್ಲಿ ಮಕ್ಕಳಿಗೆ ತಾಯಂದಿರು ಹಾಲು ಉಣಿಸುವಲ್ಲಿ ಹೆಚ್ಚಿನ ನಿಗಾವಹಿಸದಿರುವುದದು ಸಮೀಕ್ಷೆಯಿಂದ ಕಂಡುಬಂದಿದೆ. ಹಲವಾರು ಬಾರಿ ಮೂಡನಂಬಿಕೆಗಳು, ಸಂಪ್ರದಾಯಗಳು, ಅಜ್ಞಾನ ಇದಕ್ಕೆ ಕಾರಣವಾಗಿದೆ. ಮಕ್ಕಳ ಮರಣ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ತಾಯಿ ಹಾಲು ಪ್ರಮುಖ ಪಾತ್ರ ವಹಿಸಿದೆ ಎಂದರು.
ಶಿಶುವಿನ ಬೆಳವಣಿಗೆಗೆ ಹಾಗೂ ಬೌದ್ಧಿಕ ವಿಕಸನಕ್ಕೆ ತಾಯಿ ಹಾಲು ಅಮೃತವಿದ್ದಂತೆ. ಮಕ್ಕಳ ಪೌಷ್ಠಿಕತೆ, ಜೊತೆಗೆ ತಾಯಿ ಮತ್ತು ಶಿಶುವಿನ ಆರೋಗ್ಯ ಉತ್ತಮವಾಗಿರಲು ಶಿಶುವಿಗೆ ಕನಿಷ್ಠ ಒಂದು ವರ್ಷದವರೆಗೆ ಸ್ತನ್ಯಪಾನ ಮಾಡಬೇಕು ಎಂದು ಡಾ.ಮಹೇಂದ್ರ ತಿಳಿಸಿದರು
ವೈದ್ಯಕೀಯ ಕಾಲೇಜಿನ ಡಾ.ರಾಮಚಂದ್ರ, ಡಾ.ಪುರುಷೋತ್ತಮ, ಡಾ.ರಾಜೇಶ್ವರಿ, ಮೇರಿ ನಾಣಯ್ಯ ಇತರರು ಹಾಜರಿದ್ದರು.







