ಶರದ್ ಯಾದವ್ ರಿಂದ ನೂತನ ಪಕ್ಷ ಸ್ಥಾಪನೆ?: ನಿಕಟವರ್ತಿ ಸುಳಿವು

ಪಾಟ್ನ, ಆ.2: ಬಿಹಾರದ ‘ಮಹಾ ಮೈತ್ರಿ’ಯಲ್ಲೇ ಉಳಿದುಕೊಳ್ಳುವ ನಿಟ್ಟಿನಲ್ಲಿ ಶರದ್ ಯಾದವ್ ನೂತನ ಪಕ್ಷವೊಂದನ್ನು ಸ್ಥಾಪಿಸುವ ಸಾಧ್ಯತೆಯಿದೆ ಎಂದು ಶರದ್ ನಿಕಟವರ್ತಿ ತಿಳಿಸಿದ್ದಾರೆ.
ಶರದ್ ಯಾದವ್ ಅವರು ತಮ್ಮ ಹಳೆಯ ಮಿತ್ರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ರಾಜಕೀಯ ಪರಿಸ್ಥಿತಿಯನ್ನು ಆಳವಾಗಿ ವಿಮರ್ಶಿಸುತ್ತಿದ್ದಾರೆ. ಹೊಸ ಪಕ್ಷ ಸ್ಥಾಪಿಸುವ ವಿಷಯವೂ ಒಂದು ಆಯ್ಕೆಯಾಗಿದ್ದು ಈ ಕುರಿತೂ ಗಂಭೀರವಾಗಿ ಆಲೋಚಿಸಲಾಗುತ್ತಿದೆ ಎಂದು ಹಿರಿಯ ಜೆಡಿಯು ಮುಖಂಡ ಮತ್ತು ಶರದ್ ಯಾದವ್ ಅವರ ನಂಬಿಗಸ್ತ ನಿಕಟವರ್ತಿ ವಿಜಯ್ ವರ್ಮ ತಿಳಿಸಿದ್ದಾರೆ.
ಸಚಿವನಾಗಿ ಕೇಂದ್ರ ಸರಕಾರದ ಜೊತೆ ಸೇರಿಕೊಳ್ಳುವ ವರದಿಯನ್ನು ಶರದ್ ತಳ್ಳಿಹಾಕಿದ್ದಾರೆ ಎಂದು ವರ್ಮ ತಿಳಿಸಿದ್ದಾರೆ. ಜಾತ್ಯಾತೀತ ಪಕ್ಷಗಳ ಒಕ್ಕೂಟದ ಭಾಗವಾಗಿಯೇ ತಾನು ಮುಂದುವರಿಯುವುದಾಗಿ ತಿಳಿಸಿರುವ ಶರದ್, ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಹಾಗೂ ಸಿಪಿಐಎಂ ಮುಖಂಡ ಸೀತಾರಾಮ್ ಯೆಚೂರಿಯವರನ್ನು ಭೇಟಿಯಾಗಿದ್ದಾರೆ ಎಂದು ವರ್ಮ ಹೇಳಿದ್ದಾರೆ.
ಪಕ್ಷ ರಚಿಸುವ ಬಗ್ಗೆ ಯಾರೊಂದಿಗೆ ಶರದ್ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ, ಅವರ (ಶರದ್ ಯಾದವ್) ನೆಟ್‌ವರ್ಕ್ ವ್ಯಾಪ್ತಿ ವಿಶಾಲವಾಗಿದೆ ಎಂದು ವರ್ಮ ಉತ್ತರಿಸಿದರು. ಬಿಜೆಪಿಯೊಂದಿಗಿನ ಮೈತ್ರಿಯನ್ನು ವಿರೋಧಿಸಿರುವ ಜೆಡಿಯು ಸಂಸದರಾದ ಅಲಿ ಅನ್ವರ್ ಮತ್ತು ವೀರೇಂದ್ರ ಕುಮಾರ್ ಅವರು ಶರದ್ ಯಾದವ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದೂ ಅವರು ತಿಳಿಸಿದರು.
ಆದರೆ ಶರದ್ ಹೊಸ ಪಕ್ಷ ಸ್ಥಾಪನೆ ಸುದ್ದಿ ಕೇವಲ ‘ಊಹಾಪೋಹ’ ಎಂದು ಶರದ್ ಯಾದವರ ಮತ್ತೋರ್ವ ನಿಕಟವರ್ತಿ, ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಪ್ರತಿಕ್ರಿಯಿಸಿದ್ದಾರೆ.







