ಕುರುಬ ಸಮಾಜಕ್ಕೆ ಪ್ರತ್ಯೇಕ ಧರ್ಮದ ಅಗತ್ಯವಿಲ್ಲ: ರುದ್ರಣ್ಣ ಗುಳಗುಳಿ

ಗದಗ, ಆ.2: ಹಾಲುಮತ ಧರ್ಮವು ದಿನನಿತ್ಯದ ಆಚರಣೆಯಲ್ಲಿರುವುದರಿಂದ ಅದಕ್ಕೆ ಅದರದ್ದೇ ಆದ ಸ್ಥಾನಮಾನ ಇದೆ. ಎಲ್ಲ ಸಮಾಜದವರು ಅದನ್ನು ಗೌರವಿಸುತ್ತಾ ಬಂದಿರುವದರಿಂದ ಅದಕ್ಕೆ ಪ್ರತ್ಯೇಕ ಧರ್ಮದ ಆವಶ್ಯಕತೆ ಇರುವುದಿಲ್ಲ ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ನಗರದ ಹೋಟೆಲ್‌ನಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಬಸವರಾಜ ದೇವರು ಶ್ರೀಗಳ ಇಂತಹ ಹೇಳಿಕೆಯಿಂದ ಈಗಾಗಲೇ ಒಗ್ಗಟ್ಟಿನಿಂದ ಹೋರಾಟ ಮಾಡುತ್ತಿರುವ ಸಂಘಟಿಕರಿಗೆ ಹಿನ್ನಡೆಯಾಗಿದೆ. ಈ ಬಗ್ಗೆ ಶ್ರೀಗಳನ್ನು ಹಾಲುಮತ ಮಹಾಸಭಾ ಭೇಟಿ ಮಾಡಿ ಅವರಿಗೆ ಇಂತಹ ದ್ವಂದ್ವ ಹೇಳಿಕೆಗಳನ್ನು ನೀಡದಿರುವಂತೆ ಮನವಿ ಮಾಡಲಾಗುವುದು. ಅಲ್ಲದೇ ಯಾರೇ ಆಗಲಿ ಇಂತಹ ಹೇಳಿಕೆಗಳಿಗೆ ಕಿವಿಗೊಡಬಾರದು. ಹಾಗೂ ಕುರುಬ ಸಮಾಜವು ಮೂಲ ಭಾರತೀಯರು ಎನ್ನವು ಮನೋಭಾವ ನಾವುಗಳ ಹೊಂದಿದ್ದೆವೆ ಎಂದು ಗುಳಗುಳಿ ಅವರು ಹೇಳಿದರು.
ಇಡೀ ರಾಜ್ಯದಲ್ಲಿ ಕುರಬರಿಗೆ ದಶಕಗಳಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಶೋಷಿತವಾಗಿರುವುದರಿಂದ ನಮ್ಮೆಲ್ಲರ ಬೇಡಿಕೆ ಎಂದರೆ ಎಸ್‌ಟಿ ಮೀಸಲಾತಿ ಮಾತ್ರ. ಈ ಬಗ್ಗೆ ಕಳೆದ ಮೂರು ವರ್ಷದಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಸರಕಾರದ ಮಟ್ಟದಲ್ಲಿ 2 ಬಾರಿ ಈ ಬಗ್ಗೆ ಚರ್ಚೆಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಅಪಾರ ನಂಬಿಕೆ ಇರುವುದರಿಂದ ಅ. 13 ರ ವರೆಗೆ ಕಾದು ನೋಡುತ್ತೆವೆ ಎಂದು ಗುಳಗುಳಿ ಅವರು ಹೇಳಿದರು.







