ಭಾರತದ 75 ಸೇನಾ ಸಿಬ್ಬಂದಿ ಪಾಕ್ ಜೈಲಿನಲ್ಲಿ

ಹೊಸದಿಲ್ಲಿ, ಆ.2: 54 ಯುದ್ದ ಕೈದಿಗಳೂ ಸೇರಿದಂತೆ ನಾಪತ್ತೆಯಾಗಿರುವ ಭಾರತದ 75 ಸೇನಾ ಸಿಬ್ಬಂದಿ ಪಾಕಿಸ್ತಾನದ ಜೈಲಿನಲ್ಲಿರುವ ಸಾಧ್ಯತೆಯಿದೆ ಎಂದು ಸರಕಾರ ತಿಳಿಸಿದೆ.
ಆದರೆ ನಾಪತ್ತೆಯಾಗಿರುವ ಭಾರತದ ಸೇನಾ ಸಿಬ್ಬಂದಿ ಇರುವಿಕೆಯನ್ನು ಇದುವರೆಗೆ ಪಾಕಿಸ್ತಾನ ದೃಢಪಡಿಸಿಲ್ಲ ಎಂದು ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ವಿ.ಕೆ.ಸಿಂಗ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಜುಲೈ 27ರವರೆಗಿನ ಮಾಹಿತಿಯಂತೆ ಪಾಕಿಸ್ತಾನದ ಜೈಲಿನಲ್ಲಿ 417 ಮೀನುಗಾರರು ಮತ್ತು ಶ್ರೀಲಂಕಾದ ಜೈಲಿನಲ್ಲಿ 15 ಮೀನುಗಾರರಿದ್ದು ಇವರೆಲ್ಲಾ ಭಾರತದ ಮೀನುಗಾರರಾಗಿರುವ ಸಾಧ್ಯತೆಯಿದೆ. ಪಾಕ್ ಜೈಲಿನಲ್ಲಿರುವ ಮೀನುಗಾರರ ರಾಷ್ಟ್ರೀಯತೆ ಇನ್ನೂ ದೃಢಪಟ್ಟಿಲ್ಲ. ಆದರೆ ಶ್ರೀಲಂಕಾದ ಜೈಲಿನಲ್ಲಿರುವ 15 ಮೀನುಗಾರರು ತಮಿಳುನಾಡು ಮತ್ತು ಪುದುಚೇರಿಯವರು ಎನ್ನಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಭಾರತೀಯ ಮೀನುಗಾರರು ಮತ್ತು ಮೀನುಗಾರಿಕಾ ದೋಣಿಗಳನ್ನು ತ್ವರಿತವಾಗಿ ಭಾರತಕ್ಕೆ ಕಳುಹಿಸಿಕೊಡುವಂತೆ ಪಾಕ್ ಮತ್ತು ಶ್ರೀಲಂಕಾ ಸರಕಾರದ ಜೊತೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ.





