ಐಟಿ ದಾಳಿಗೆ ಖಂಡನೆ: ನಾಳೆ ಯುವ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ, ಆ.2: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ ಎನ್ನುವ ಮಾಹಿತಿ ಅರಿತ ಕೇಂದ್ರ ಸರಕಾರ ಐಟಿ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಘಟಕದ ಅಧ್ಯಕ್ಷರಾದ ಹನೀಫ್ ಸಂಪಾಜೆ ಹಾಗೂ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಆರೋಪಿಸಿದ್ದಾರೆ.
ಜನಪರವಾದ ಕಾರ್ಯಗಳ ಮೂಲಕ ಜನಮನ್ನಣೆ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಮುಂದಿನ ಚುನಾವಣೆಯಲ್ಲೂ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳಿದ್ದು, ಇದರಿಂದ ಬಿಜೆಪಿ ಹತಾಶಗೊಂಡಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ಟೀಕಿಸಿದ್ದಾರೆ.
ರಾಜಕೀಯ ದ್ವೇಷವನ್ನು ಸಾಧಿಸುವುದಕ್ಕಾಗಿಯೇ ಐಟಿ ದಾಳಿಯನ್ನು ಮಾಡಿಸಲಾಗಿದೆ ಎಂದು ಆರೋಪಿಸಿರುವ ಹನೀಫ್ ಸಂಪಾಜೆ ಹಾಗೂ ಶಾಫಿ ಕೊಟ್ಟಮುಡಿ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಆ.3 ರಂದು ಮಧ್ಯಾಹ್ನ 12 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್ ರನ್ನು ಸೋಲಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲವನ್ನು ಮಾಡಲು ಹೊರಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ತಂಡದ ಕುತಂತ್ರವನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಐಟಿ ದಾಳಿ ನಡೆಸಿ ಬೆದರಿಸುವ ತಂತ್ರಕ್ಕೆ ಕೈಹಾಕಲಾಗಿದೆ ಎಂದು ಆರೋಪಿಸಿರುವ ಹನೀಫ್ ಸಂಪಾಜೆ ಹಾಗೂ ಶಾಫಿ ಕೊಟ್ಟಮುಡಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.







