ಮದ್ಯದಂಗಡಿಗೆ ಪರವಾನಿಗೆ ನೀಡದಂತೆ ಮನವಿ
.jpg)
ಸಾಗರ, ಆ.2: ತಾಲ್ಲೂಕಿನ ತಾಳಗುಪ್ಪದಲ್ಲಿ ಇರುವ ಮದ್ಯದಂಗಡಿ ಪರವಾನಿಗೆಯನ್ನು ರದ್ದುಪಡಿಸಬೇಕು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡದಂತೆ ಒತ್ತಾಯಿಸಿ ಬುಧವಾರ ರೈತ ಸಂಘ ಹಾಗೂ ತಾಳಗುಪ್ಪ ಹೋಬಳಿ ಗ್ರಾಮಸ್ಥರ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ತಾಳಗುಪ್ಪ ಗ್ರಾಮವು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹಾದು ಹೋಗಿದ್ದು, ಹೋಬಳಿ ಕೇಂದ್ರವಾಗಿದೆ. ಈ ಗ್ರಾಮಕ್ಕೆ ಹೊಂದಿಕೊಂಡು ಅಕ್ಕಪಕ್ಕದಲ್ಲಿ ನೂರಾರು ಹಳ್ಳಿಗಳಿವೆ. ಇಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ಕೂಲಿಕಾರ್ಮಿಕರಾಗಿದ್ದು, ಸಣ್ಣ ಹಾಗೂ ಅತಿಸಣ್ಣ ರೈತರಾಗಿದ್ದಾರೆ. ದುರಾದೃಷ್ಟವೆಂದರೆ ಅನೇಕ ಕುಟುಂಬದ ಯಜಮಾನರು ತಾವು ದುಡಿದ ಬಹುಪಾಲು ಹಣವನ್ನು ಮದ್ಯಪಾನ ಸೇವನೆಗೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಅವರನ್ನು ನಂಬಿಕೊಂಡ ಕುಟುಂಬ ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಕುಡಿತದ ದುಶ್ಚಟಕ್ಕೆ ಸಿಲುಕಿರುವ ಅನೇಕ ಜನರು ಅನಾರೋಗ್ಯಕ್ಕೆ ತುತ್ತಾಗಿ, ಮೃತಪಟ್ಟ ಘಟನೆ ಸಹ ನಡೆದಿದೆ. ಇದರಿಂದ ಕುಟುಂಬ ಬೀದಿಪಾಲಾಗುತ್ತಿದೆ. ಮಕ್ಕಳಿಗೆ ಸರಿಯಾಗಿ ವಿದ್ಯಾಭ್ಯಾಸ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಾಳಗುಪ್ಪ ಹೋಬಳಿ ವ್ಯಾಪ್ತಿಯಲ್ಲಿ ಮದ್ಯದಂಗಡಿಯ ಪರವಾನಿಗೆ ರದ್ದು ಮಾಡುವಂತೆ ಹಿಂದಿನಿಂದಲೂ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಸಂಘಗಳು, ರೈತ ಸಂಘ, ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಾ ಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಳಗುಪ್ಪದಲ್ಲಿ ಸಾರ್ವಜನಿಕರಿಗೆ ಮಾರಕವಾಗಿರುವ ಮದ್ಯದಂಗಡಿಯನ್ನು ತಕ್ಷಣ ಬಂದ್ ಮಾಡಬೇಕು. ಹೊಸದಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬಾರದು. ಒಂದೊಮ್ಮೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಆರ್. ಚಂದ್ರಶೇಖರ ಗೂರಲಕೆರೆ, ಉಪಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ರಾಮಣ್ಣ, ತಾಳಗುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್, ಸದಸ್ಯರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಪ್ರಮುಖರಾದ ಮೋಹನ್ ಶೇಟ್, ಸೂರಜ್, ಶ್ರೀಕಾಂತ್ ಗುಡ್ಡೆಮನೆ, ಪ್ರೀತಮ್, ವಿಜಯಗೌಡ, ಗೌತಮ್ ಇನ್ನಿತರರು ಹಾಜರಿದ್ದರು.







