ಸರಕಾರಿ ಕಚೇರಿಯಲ್ಲಿ ರಕ್ಷಾಬಂಧನ ಕಡ್ಡಾಯ: ದಿಯು ದಾಮನ್‌ನಲ್ಲಿ ಸರಕಾರದ ಆದೇಶ

ಹೊಸದಿಲ್ಲಿ, ಆ.2: ಕೇಂದ್ರಾಡಳಿತ ಪ್ರದೇಶವಾದ ದಾಮನ್ ಮತ್ತು ದಿಯುವಿನಲ್ಲಿ ರಕ್ಷಾಬಂಧನ ಆಚರಣೆಯನ್ನು ಕಡ್ಡಾಯಗೊಳಿಸಲಾಗಿದ್ದು , ಅಂದು ಮಹಿಳಾ ಉದ್ಯೋಗಿಗಳು ಪುರುಷ ಸಹೋದ್ಯೋಗಿಗಳ ಕೈಗೆ ರಾಖಿ ಕಟ್ಟಬೇಕೆಂದು ಸೂಚಿಸಲಾಗಿದೆ.
ಆಗಸ್ಟ್ 7ರಂದು ರಕ್ಷಾಬಂಧನ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಂದು ಎಲ್ಲಾ ಸರಕಾರಿ ಕಚೇರಿ/ ಇಲಾಖೆ ತೆರೆದಿರುತ್ತದೆ. ಎಲ್ಲಾ ಸಿಬ್ಬಂದಿಗಳು ಒಟ್ಟಾಗಿ ಸೂಕ್ತ ಸಮಯದಲ್ಲಿ ಹಬ್ಬ ಆಚರಿಸಬೇಕು. ಮಹಿಳಾ ಉದ್ಯೋಗಿಗಳು ಪುರುಷ ಸಹೋದ್ಯೋಗಿಗಳಿಗೆ ರಾಖಿ ಕಟ್ಟಬೇಕು ಎಂದು ಉಪಕಾರ್ಯದರ್ಶಿ (ಸಿಬ್ಬಂದಿ) ಗುರ್‌ಪ್ರೀತ್ ಸಿಂಗ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಖೋಡಭಾ ಪಟೇಲ್ ಅವರ ನಿರ್ದೇಶನದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನ್ಯಧರ್ಮೀಯ ಉದ್ಯೋಗಿಗಳಿಗೂ ಇದು ಅನ್ವಯಿಸುತ್ತದೆಯೇ ಎಂಬುದರ ಬಗ್ಗೆ ಆದೇಶದಲ್ಲಿ ಯಾವುದೇ ಮಾಹಿತಿ ಇಲ್ಲ. ಎಲ್ಲಾ ಕಚೇರಿ, ಇಲಾಖೆಗಳ ಉದ್ಯೋಗಿಗಳ ಆ.7ರ ಹಾಜರುಪಟ್ಟಿಯನ್ನು ಮರುದಿನ ಸಂಜೆ ವೇಳೆಗೆ ಸರಕಾರಕ್ಕೆ ಸಲ್ಲಿಸಬೇಕು ಎಂದೂ ಆದೇಶದಲ್ಲಿ ತಿಳಿಸುವ ಮೂಲಕ, ಹಾಜರಾತಿಯನ್ನು ಪರೋಕ್ಷವಾಗಿ ಕಡ್ಡಾಯಗೊಳಿಸಲಾಗಿದೆ.
ಈ ಆದೇಶ ಹಾಸ್ಯಾಸ್ಪದವಾಗಿದೆ. ಈ ವಿಷಯದಲ್ಲಿ ಸೂಕ್ಷ್ಮಭಾವನೆ ಒಳಗೊಂಡಿದೆ. ನಾನು ಯಾರಿಗೆ ರಾಖಿ ಕಟ್ಟಬೇಕೆಂದು ಸರಕಾರ ಆದೇಶಿಸಲು ಸಾಧ್ಯವೇ. ಕಾರ್ಯನಿರ್ವಹಿಸುವ ಸ್ಥಳದಲ್ಲಿ ವೃತ್ತಿಪರತೆ ಉಳಿಸಿಕೊಂಡು ಬರಬೇಕು ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಮಹಿಳಾ ಉದ್ಯೋಗಿಯೋರ್ವರು ಅಸಮಾಧಾನ ಸೂಚಿಸಿದ್ದಾರೆ.
ರಕ್ಷಾಬಂಧನ ಹಬ್ಬಕ್ಕೆ ರಾಷ್ಟ್ರೀಯ ಮಹತ್ವವಿದೆ ಎಂದು ಹೇಳಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ಈ ಸಂಸ್ಕೃತಿ ಪ್ರತಿಷ್ಠಾಪಿಸಿರುವ ವೌಲ್ಯಗಳನ್ನು ಅಳವಡಿಸಿಕೊಳ್ಳಲು ಈ ಹಬ್ಬವನ್ನು ಎಲ್ಲೆಡೆ ಆಚರಿಸುವ ಅಗತ್ಯವಿದೆ ಎಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ .







