ಡಿಕೆಶಿ ನಿವಾಸದ ಮೇಲೆ ಐಟಿ ದಾಳಿಗೆ ಆಕ್ರೋಶ
ಬೆಂಗಳೂರು, ಆ.2: ನಮ್ಮ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆಯು ರಾಜಕೀಯ ದುರುದ್ದೇಶ ಪೂರಿತ ದಾಳಿ ನಡೆಸಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರನ್ನೆ ಗುರಿಯನ್ನಾಗಿಸಿಕೊಂಡು ಐಟಿ ಹಾಗೂ ಜಾರಿ ನಿರ್ದೇಶನಾಲಯ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆದರಿಸುವ ಹಾಗೂ ಧಕ್ಕೆ ತರುವ ಪ್ರಯತ್ನವನ್ನು ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಗುಜರಾತಿನಲ್ಲಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು 15-20 ಕೋಟಿ ರೂ.ಹಣದ ಆಮಿಷವೊಡ್ಡಿ ಖರೀದಿ ಮಾಡುವ ಪ್ರಯತ್ನವನ್ನು ಬಿಜೆಪಿ ಯವರು ಮಾಡಿದ್ದಾರೆ. ವಾಸ್ತವವಾಗಿ ಐಟಿ ದಾಳಿಯು ಬಿಜೆಪಿಯವರ ಮೇಲೆ ನಡೆಯಬೇಕಿತ್ತು ಎಂದು ಸೋಮಶೇಖರ್ ಹೇಳಿದ್ದಾರೆ.
ಶಾಸಕರನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ಉಳಿಸುವವರ ಮೇಲೆ ಐಟಿ ದಾಳಿ ನಡೆಸುವ ಮೂಲಕ ಬಿಜೆಪಿ ಸೇಡಿನ ರಾಜಕೀಯ ಮತ್ತು ಹಿಟ್ಲರ್ ಧೋರಣೆಯನ್ನು ಅನುಸರಿಸುತ್ತಿದೆ. ಇದೇ ರೀತಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದರೆ, ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಸೋಮಶೇಖರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







