ರಾಜ್ಯಸಭಾ ಚುನಾವಣೆಯಲ್ಲಿ ‘ನೋಟಾ’ ಅವಕಾಶ : ವಿಪಕ್ಷಗಳ ಪ್ರತಿಭಟನೆ

ಹೊಸದಿಲ್ಲಿ, ಆ.2: ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ಸಂದರ್ಭ ಮತ ಹಾಕುವ ಶಾಸಕರಿಗೆ ‘ನೋಟಾ’ (ನನ್ ಆಫ್ ದಿ ಎಬವ್- ಈ ಮೇಲಿನವರಲ್ಲಿ ಯಾರೂ ಅಲ್ಲ) ಎಂಬ ಆಯ್ಕೆಯನ್ನು ನೀಡಿರುವ ಚುನಾವಣಾ ಆಯೋಗದ ಕ್ರಮದ ಬಗ್ಗೆ ವಿಪಕ್ಷಗಳು ಪ್ರತಿಭಟನೆ ನಡೆಸಿವೆ.
ಈ ಚುನಾವಣೆಯಲ್ಲಿ ‘ನೋಟಾ’ ಆಯ್ಕೆ ನೀಡಿರುವ ಬಗ್ಗೆ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಕಾರಣ ಸದನದ ಕಲಾಪವನ್ನು ಮುಂದೂಡಲಾಯಿತು.
ಮಧ್ಯಾಹ್ನ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಮುಖಂಡ ಆನಂದ್ ಶರ್ಮ, ಸಂವಿಧಾನಕ್ಕೆ ಅಥವಾ ಕಾನೂನಿಗೆ ತಿದ್ದುಪಡಿ ಮಾಡದೆ , ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ‘ನೋಟಾ’ ಆಯ್ಕೆಯನ್ನು ನೀಡಲಾಗಿದೆ ಎಂದು ಆಕ್ಷೇಪ ಸೂಚಿಸಿದರು. ಸಂವಿಧಾನಕ್ಕೆ ತಿದ್ದುಪಡಿ ಮಾಡದೆ ಹೀಗೆ ಮಾಡಲು ಸಾಧ್ಯವೇ ಎಂದವರು ಪ್ರಶ್ನಿಸಿದರು. ರಾಜ್ಯಸಭೆಯಲ್ಲಿ ಖಾಲಿ ಇರುವ ಸ್ಥಾನಗಳ ಬಗ್ಗೆ ಸದನದಲ್ಲಿ ಪ್ರಕಟಣೆ ನೀಡಲಾಗಿದೆ. ಈ ಮಧ್ಯೆ ಹೊಸ ಕರಾರನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ ಎಂದವರು ಹೇಳಿದರು.
ಇದಕ್ಕೆ ಉತ್ತರಿಸಿದ ಸಭಾಪತಿ ಹಾಮಿದ್ ಅನ್ಸಾರಿ, ಈ ವಿಷಯದ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದು ಎಂದು ಹೇಳಿ ಪ್ರಶ್ನೋತ್ತರ ಅವಧಿ ಮುಂದುವರಿಸಲು ಮುಂದಾದರು. ಆದರೆ ಇದಕ್ಕೆ ವಿಪಕ್ಷಗಳು ತೃಪ್ತರಾಗಲಿಲ್ಲ.
ಈ ಸಂದರ್ಭ ಹೇಳಿಕೆ ನೀಡಿದ ಸದನದ ನಾಯಕ, ವಿತ್ತ ಸಚಿವ ಅರುಣ್ ಜೇಟ್ಲಿ, ತಾನು ತಿಳಿದುಕೊಂಡಿರುವಂತೆ ‘ನೋಟಾ’ ಆಯ್ಕೆಯನ್ನು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನೀಡಲಾಗಿದೆ ಎಂದರು.
ಈ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಸುಪ್ರೀಂಕೋರ್ಟ್ ‘ನೋಟಾ’ ಆಯ್ಕೆಯ ಕುರಿತು ತೀರ್ಪು ನೀಡಿದೆ. ಇದನ್ನು ಆಧಾರವಾಗಿರಿಸಿಕೊಂಡು 324ನೇ ಅನುಚ್ಛೇದದಡಿ ಚುನಾವಣಾ ಆಯೋಗ ಪ್ರಕಟಣೆ ನೀಡಿದೆ. ಆದ್ದರಿಂದ ಈ ಹಿಂದಿನ ಸುತ್ತೋಲೆಯನ್ನೇ ಆಯೋಗ ಮತ್ತೊಮ್ಮೆ ಕಳಿಸಿದೆ ಎಂದು ಜೇಟ್ಲಿ ಹೇಳಿದರು. ಸುತ್ತೋಲೆಯ ಕುರಿತು ಯಾರಿಗಾದರೂ ಅಸಮಾಧಾನವಿದ್ದರೆ ಅವರಿಗೆ ತಮ್ಮದೇ ಆಯ್ಕೆಯಿದೆ . ಇದಕ್ಕೂ ರಾಜ್ಯಸಭೆಯ ಪ್ರಶ್ನೋತ್ತರ ಅವಧಿಗೂ ಸಂಬಂಧವಿದೆಯೇ ಎಂದವರು ಹೇಳಿದರು.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಸಂದರ್ಭ ‘ನೋಟಾ’ ಆಯ್ಕೆ ಇರಲಿಲ್ಲ ಎಂದು ವಿಪಕ್ಷಗಳು ಹೇಳಿದವು. ಇದೊಂದು ಗಂಭೀರ ವಿಷಯ ಎಂದ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್, ಗುಜರಾತ್ ರಾಜ್ಯಕ್ಕೆ ಮಾತ್ರ ಸಂಬಂಧಿಸಿದ ಪ್ರತ್ಯೇಕ ಸಂವಿಧಾನ ಏನಾದರೂ ಇದೆಯೇ ಎಂದು ಪ್ರಶ್ನಿಸಿದರು. ವಿಪಕ್ಷಗಳ ಪ್ರತಿಭಟನೆ ಮುಂದುವರಿಯುತ್ತಿರುವಂತೆಯೇ ಸಭಾಪತಿ ಹಾಮಿದ್ ಅನ್ಸಾರಿ ಸದನವನ್ನು 10 ನಿಮಿಷ ದ ಅವಧಿಗೆ ಮುಂದೂಡಿದರು.
ಗುಜರಾತ್‌ನಲ್ಲಿ ರಾಜ್ಯಸಭೆಗೆ ಅಭ್ಯರ್ಥಿಗಳಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹಾಗೂ ಸಚಿವೆ ಸ್ಮತಿ ಇರಾನಿ ಕಣದಲ್ಲಿರುವುದು ಈ ಬಾರಿಯ ರಾಜ್ಯಸಭಾ ಚುನಾವಣೆಯ ಕುತೂಹಲ ಹೆಚ್ಚಿಸಿದೆ.
ಸದನ ಮರು ಸಮಾವೇಶಗೊಂಡಾಗಲೂ ವಿಪಕ್ಷಗಳು ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರಿಸಿದಾಗ ಸದನವನ್ನು ಅಪರಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.







