ಖಾಸಗಿತನದ ಹಕ್ಕು:ತೀರ್ಪು ಕಾಯ್ದಿರಿಸಿದ ಸುಪ್ರೀಂ

ಹೊಸದಿಲ್ಲಿ,ಆ.2: ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕೇ ಎಂಬ ಕುರಿತು 15 ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಬುಧವಾರ ತನ್ನ ತೀರ್ಪನ್ನು ಕಾಯ್ದಿರಿಸಿತು.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ತನ್ನ ತೀರ್ಪಿನ ಪ್ರಕಟಣೆಗೆ ಯಾವುದೇ ದಿನಾಂಕವನ್ನು ನಿಗದಿಗೊಳಿಸಿಲ್ಲ.
ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠವನ್ನು ಜು.18ರಂದು ರಚಿಸಲಾಗಿತ್ತು. ಆಧಾರ್ ಅಡಿ ವೈಯಕ್ತಿಕ ವಿವರಗಳ ಸಂಗ್ರಹವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿದಾರರ ಪರ ವಕೀಲ ಗೋಪಾಲ ಸುಬ್ರಹ್ಮಣ್ಯಂ ಅವರು ಖಾಸಗಿತನದ ಪರಿಕಲ್ಪನೆಯು ಸಂವಿಧಾನವು ನೀಡಿರುವ ಸ್ವಾತಂತ್ರ/ಘನತೆಯ ಹಕ್ಕಿನಲ್ಲಿಯೇ ಅಡಕಗೊಂಡಿದೆ ಎಂದು ವಾದಿಸಿದ್ದರು.
ಅರ್ಜಿದಾರರ ಪರ ಇನ್ನೋರ್ವ ವಕೀಲ ಶಾಮ್ ದಿವಾನ ಖಾಸಗಿತನವನ್ನು ವ್ಯಾಖ್ಯಾನಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದ್ದರು.
ಜು.26ರಂದು ತನ್ನ ವಾದವನ್ನು ಆರಂಭಿಸಿದ್ದ ಕೇಂದ್ರ ಸರಕಾರವು ಖಾಸಗಿತನ ಕುರಿತ ತನ್ನ ನಿಲುವಿನಲ್ಲಿ ಬದಲಾವಣೆ ತಂದುಕೊಂಡಿತ್ತಲ್ಲದೆ, ಅದು ಸಂವಿಧಾನದಡಿ ಮೂಲಭೂತ ಹಕ್ಕು ಎನ್ನುವುದನ್ನು ಮೊದಲ ಬಾರಿಗೆ ಒಪ್ಪಿಕೊಂಡಿತ್ತು. ಆದರೆ ಈ ಹಕ್ಕನ್ನು ಖಾಸಗಿತನದ ಪ್ರತಿಯೊಂದು ಮಗ್ಗುಲಿಗೂ ಅನ್ವಯಿಸುವಂತಿಲ್ಲ ಎಂದು ಅದು ವಾದಿಸಿತ್ತು.
ಕರ್ನಾಟಕ, ಪಂಜಾಬ್, ಪ.ಬಂಗಾಳ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಖಾಸಗಿತನ ಸಂವಿಧಾನಬದ್ಧ ಹಕ್ಕು ಎನ್ನುವ ನಿಲುವನ್ನು ಬೆಂಬಲಿಸಿದ್ದವು.







