ದರ್ಬೆತಡ್ಕಕ್ಕೆ ಸರಿಯಾಗಿ ಬಾರದ ಬಸ್ಸು: ಸಾರ್ವಜನಿಕರ ಆಕ್ರೋಶ
ಪುತ್ತೂರು,ಆ.02: ತಾಲೂಕಿನ ಗ್ರಾಮೀಣ ಪ್ರದೇಶವಾದ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕಕ್ಕೆ ಕಳೆದ ಕೆಲವು ವಾರಗಳಿಂದ ಕೆಎಸ್ಸಾರ್ಟಿಸಿ ಬಸ್ಸು ಸರಿಯಾಗಿ ಬರುತ್ತಿಲ್ಲ, ದಿನಕ್ಕೆ ಎರಡು ಬಾರಿ ಎರಡು ದಾರಿಯ ಮೂಲಕ ಬಸ್ಸಿನ ವ್ಯವಸ್ಥೆ ಇದ್ದರೂ ನಿಗತ ಸ್ಥಳಕ್ಕೆ ಬಸ್ಸು ಬಾರದೇ ಇರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಬೆತ್ತಡ್ಕಕ್ಕೆ ಶೇಕಮಲೆ ಮಾರ್ಗವಾಗಿ ಮತ್ತು ಉಪ್ಪಳಿಗೆ ಮಾರ್ಗವಾಗಿ ಬಸ್ ಸಂಚಾರ ಕಳೆದ ಒಂದು ವರ್ಷದಿಂದ ಇದೆ. ಶೇಕಮಲೆ ಮಾರ್ಗವಾಗಿ ಸಂಚರಿಸುವ ಬಸ್ಸು ಸರಿಯಾದ ಸಮಯಕ್ಕೆ ಬರುತ್ತಿದೆ. ಎರಡೂ ಬಸ್ಸುಗಳು ವಿಭಿನ್ನ ಸಮಯದಲ್ಲಿ ದರ್ಬೆತ್ತಡ್ಕಕ್ಕೆ ಬರಬೇಕು ಎಂಬುದು ಕೆಎಸ್‍ಆರ್‍ಟಿಸಿ ಸೂಚನೆಯಾಗಿತ್ತು. ಆದರೆ ಉಪ್ಪಳಿಗೆ ಮಾರ್ಗವಾಗಿ ಬರುವ ಬಸ್ಸು ಸಂಚಾರವನ್ನು ಅರ್ಧದಲ್ಲೇ ಮೊಠಕುಗೊಳಿಸಿ ಪುತ್ತೂರಿಗೆ ತೆರಳುತ್ತಿದೆ. ಇತ್ತ ದರ್ಬೆತ್ತಡ್ಕದಲ್ಲಿ ಬಸ್ಸಿಗೆ ಕಾಯುವ ಮಂದಿ ಬಸ್ಸಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ರಸ್ತೆ ಚೆನ್ನಾಗಿದ್ದರೂ ಬಸ್ಸು ಯಾಕೆ ಅರ್ಧಕ್ಕೆ ಸಂಚಾರವನ್ನು ಯಾಕೆ ಮೊಠಕುಗೊಳಿಸುತ್ತಿದೆ ಎಂದು ಗ್ರಾಮಸ್ಥರಿಗೆ ಮಾಹಿತಿ ಇಲ್ಲ. ಬಸ್ಸನ್ನೇ ನಂಬಿ ಪ್ರಯಾಣದ ಸಿದ್ದತೆ ನಡೆಸುವ ಮಂದಿ ಬಾಡಿಗೆ ವಾಹನ ಮಾಡಿಕೊಂಡು ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬಸ್ ಚಾಲಕ ಯಾಕೆ ಅರ್ಧದಲ್ಲೇ ಸಂಚಾರವನ್ನು ಮೊಠಕುಗೊಳಿಸುತ್ತಾರೆ ಎಂಬುದನ್ನು ಪರಿಶಿಲನೆ ಮಾಡುತ್ತೇನೆ. ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು.
ಚೆಲುವೇ ಗೌಡ, ಮ್ಯಾನೇಜರ್, ಕೆಎಸ್‍ಆರ್‍ಟಿಸಿ ಘಟಕ ಪುತ್ತೂರು
ಉಪ್ಪಳಿಗೆಯಾಗಿ ಬರುತ್ತಿದ್ದ ಬಸ್‍ನಿಂದ ನಮಗೆ ತುಂಬಾ ಅನುಕೂಲವಾಗುತ್ತಿತ್ತು. ಪ್ರಸ್ತುತ ಒಂದು ತಿಂಗಳಿನಿಂದ ಬಸ್ ಸರಿಯಾಗಿ ಬರುತ್ತಿಲ್ಲ. ತರಗತಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ.ಸಿಂಚನಾ, ಶಾನ್ವಿ, ಪೃತ್ವಿ, ಶಾಲಾ ವಿದ್ಯಾರ್ಥಿಗಳು







