ಇಬ್ಬರು ಜೈಲು ಅಧಿಕಾರಿಗಳು ತಪ್ಪಿತಸ್ಥರು: ಹೈಕೋರ್ಟ್ ನಿಲುವು
ಕರೀಂಲಾಲ್ ತೆಲಗಿ ಪ್ರಕರಣ
_1.jpg)
ಬೆಂಗಳೂರು, ಆ.2: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಅಪರಾಧಿ ಅಬ್ದುಲ್ ಕರೀಂ ತೆಲಗಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಒದಗಿಸಿದ ಆರೋಪದಿಂದ ಮುಕ್ತರಾಗಿದ್ದ ಇಬ್ಬರು ಜೈಲು ಅಧಿಕಾರಿಗಳು ತಪ್ಪಿತಸ್ಥರು ಎಂಬ ನಿರ್ಣಯಕ್ಕೆ ಹೈಕೋರ್ಟ್ ಬಂದಿದೆ.
ಆದೇಶ ಇಲ್ಲದಿದ್ದರೂ ಕೈದಿಗೆ ಪ್ರಥಮ ದರ್ಜೆಯ ಸೌಲಭ್ಯ ಒದಗಿಸಿದ ಆರೋಪದ ಪ್ರಕರಣದಲ್ಲಿ ಮೈಸೂರಿನ ಜೈಲು ಸೂಪರಿಂಟೆಂಡೆಂಟ್ ಪಿ.ಎನ್.ಜಯಸಿಂಹ ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ಆಗಿದ್ದ ಜೈಲು ಅಧಿಕಾರಿ ನಂಜಪ್ಪ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ವಿಭಾಗೀಯ ನ್ಯಾಯಪೀಠ ಬಂದಿದೆ.
ಈ ಕುರಿತು ಸಿಬಿಐ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ನ್ಯಾಯಪೀಠ ಆ.3ರಂದು ಶಿಕ್ಷೆ ಪ್ರಕಟಿಸುವ ನಿರೀಕ್ಷೆ ಇದೆ. ತೆಲಗಿಗೆ ಈ ಇಬ್ಬರು ಜೈಲು ಅಧಿಕಾರಿಗಳು ಆದೇಶ ಇಲ್ಲದಿದ್ದರೂ ವಿಶೇಷ ಸೌಲಭ್ಯ ಒದಗಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಈ ಅಧಿಕಾರಿಗಳು ನಿರ್ದೋಷಿಗಳು ಎಂದು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜೈಲು ಅಧಿಕಾರಿಗಳಾದ ಜಯಸಿಂಹ, ನಂಜಪ್ಪ, ತೆಲಗಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು ಎಂದು ಸಿಬಿಐ ಮೇಲ್ಮನವಿಯಲ್ಲಿ ವಿವರಿಸಿತ್ತು.







