ಬಿಹಾರ ಸಚಿವ ಸಂಪುಟ: ಶೇ.76 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಪಾಟ್ನ, ಆ.2: ಜುಲೈ 29ರಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಹಾರದ 29 ಸಚಿವರಲ್ಲಿ ಶೇ.76 ಮಂದಿ ಅಂದರೆ 22 ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಅಲ್ಲದೆ ಈ 22 ಸಚಿವರಲ್ಲಿ 9 ಸಚಿವರ ವಿರುದ್ಧ ಕೊಲೆ, ಫೋರ್ಜರಿ, ವಂಚನೆ , ಮಹಿಳೆಯರ ವಿರುದ್ಧ ಹಿಂಸೆ ಸೇರಿದಂತೆ ಗಂಭೀರ ಕ್ರಿಮಿನಲ್ ಆರೋಪವಿದೆ ಎಂದು ‘ದಿ ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್’ನ ವರದಿಯಲ್ಲಿ ತಿಳಿಸಲಾಗಿದೆ.
ಈ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು 2015ರ ವಿಧಾನಸಭೆ ಮತ್ತು 2014ರ ಲೋಕಸಭಾ ಚುನಾವಣೆ ಸಂದರ್ಭ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರ ದಲ್ಲಿ ನೀಡಿರುವ ಮಾಹಿತಿಯ ಆಧಾರದಲ್ಲಿ ಈ ವರದಿ ಸಿದ್ದಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಹಿಂದೆ, ನಿತೀಶ್ ಕುಮಾರ್ ಆರ್‌ಜೆಡಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ರಚಿಸಿದ್ದಾಗ ಸಚಿವ ಸಂಪುಟದಲ್ಲಿದ್ದ ಕ್ರಿಮಿನಲ್ ಹಿನ್ನೆಲೆಯ ಸಚಿವರ ಸಂಖ್ಯೆ (28ರಲ್ಲಿ 19) ಹಾಲಿ ಸರಕಾರಕ್ಕಿಂತ ಕಡಿಮೆಯಾಗಿತ್ತು ಎಂದೂ ವರದಿ ತಿಳಿಸಿದೆ.
ಹಾಲಿ ಸರಕಾರದಲ್ಲಿ ಒಬ್ಬರು ಮಹಿಳೆಯರಿದ್ದರೆ ಈ ಹಿಂದಿನ ಸರಕಾರದಲ್ಲಿ ಇಬ್ಬರು ಮಹಿಳೆಯರಿದ್ದರು. ಹಾಲಿ ಸರಕಾರದ 9 ಸಚಿವರು 8ರಿಂದ 12ನೇ ತರಗತಿವರೆಗೆ ಮಾತ್ರ ಶಾಲೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. 18 ಮಂದಿ ಪದವಿ ಅಥವಾ ಉನ್ನತ ವಿದ್ಯಾರ್ಹತೆ ಹೊಂದಿದ್ದಾರೆ. ನೂತನ ಸರಕಾರದ ಸಚಿವ ಸಂಪುಟದಲ್ಲಿರುವ ಸಚಿವರ ಸರಾಸರಿ ಸಂಪತ್ತು 2.46 ಕೋಟಿ ರೂ.ಆಗಿದೆ. ಹಿಂದಿನ ಸಚಿವ ಸಂಪುಟದಲ್ಲಿ 22 ಸಚಿವರು ಕೋಟ್ಯಾಧಿಪತಿಗಳಾಗಿದ್ದರೆ, ಹಾಲಿ ಸರಕಾರದ 21 ಸಚಿವರು ಕೋಟ್ಯಾಧಿಪತಿಗಳು ಎಂದು ವರದಿ ತಿಳಿಸಿದೆ.







