ವಾರಣಾಸಿಯಲ್ಲೀಗ ಪಾನ್ಗೂ ಶಾರುಖ್ ಹೆಸರು!
ವಾರಣಾಸಿಯಲ್ಲಿ ಶಾರುಖ್ ಮತ್ತು ಅನುಷ್ಕಾ ಶರ್ಮಾ
ವಾರಣಾಸಿ,ಆ.3: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ನ್ನು ಕೊಳ್ಳೆ ಹೊಡೆಯುತ್ತವೆ, ಜೊತೆಗೆ ಅವರೊಂದಿಗೆ ಗುರುತಿಸಿಕೊಳ್ಳುವ ಯಾವುದೇ ವಸ್ತುವಾದರೂ ದುಡ್ಡಿನ ಸುರಿಮಳೆಗೈಯುತ್ತದೆ. ಈಗ ವಾರಣಾಸಿಯ ಪಾನ್ ಅಂಗಡಿಯೊಂದರ ಮಾಲಿಕ ಮಾಡಿರುವುದೂ ಇದನ್ನೆೇ. ಆತ ತಾನು ತಯಾರಿಸುವ ಪಾನ್ವೊಂದಕ್ಕೆ ಶಾರುಖ್ ಹೆಸರನ್ನಿಟ್ಟಿದ್ದಾನೆ.
ತನ್ನ ನೂತನ ಚಿತ್ರ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚಿಗೆ ವಾರಣಾಸಿ ಪ್ರವಾಸದಲ್ಲಿದ್ದ ಶಾರುಖ್ ಚಿತ್ರದಲ್ಲಿ ತನ್ನ ಸಹನಟಿ ಅನುಷ್ಕಾ ಶರ್ಮಾ ಜೊತೆ ಸತೀಶ ಕುಮಾರ್ ಎಂಬಾತನ ‘ತಾಂಬೂಲಂ ಪಾನ್ ಶಾಪ್’ಗೆ ಭೇಟಿ ನೀಡಿದ್ದರು. ಅಲ್ಲಿ ಒಂದು ಪಾನ್ನ್ನೂ ಬಾಯಿಗೆ ಹಾಕಿಕೊಂಡಿದ್ದರು.
ಅಲ್ಲಿಂದೀಚೆಗೆ ಈ ಸೂಪರ್ ಸ್ಟಾರ್ ತಿಂದಿದ್ದ ಪಾನ್ ಯಾವುದು ಎಂದು ತಿಳಿದು ಕೊಳ್ಳಲು ಪಾನ್ಪ್ರಿಯರು ಮತ್ತು ಇತರರು ಕುಮಾರ್ಗೆ ಮುತ್ತಿಗೆ ಹಾಕುತ್ತಿದ್ದಾರೆ. ಇದರಿಂದ ಉತ್ತೇಜಿತ ಕುಮಾರ್ ಸಿಹಿ ಪಾನ್ವೊಂದಕ್ಕೆ ‘ಶಾರುಖ್ ಖಾನ್ ಪಾನ್’ ಎಂದು ನಾಮಕರಣ ಮಾಡಿದ್ದಾನೆ. ಅಂದ ಹಾಗೆ ಈ ಪಾನ್ನಲ್ಲಿರುವುದು ಮಾಮೂಲಿ ಸಾಮಗ್ರಿಗಳೇ! ಆದರೂ ಗ್ರಾಹಕರು ಶಾರುಖ್ ಪಾನ್ನ್ನೇ ಕೇಳಿ ಖರೀದಿಸುತ್ತಿದ್ದಾರೆ. ಹೀಗಾಗಿ ಕುಮಾರ್ನ ಜೇಬೂ ಭರ್ತಿಯಾಗುತ್ತಿದೆ.
1970ರ ದಶಕದಲ್ಲಿ ಗಲ್ಲಾ ಪೆಟ್ಟಿಗೆಯನ್ನು ಸೂರೆ ಹೊಡೆದಿದ್ದ ಅಮಿತಾಭ್ ಬಚ್ಚನ್ ನಟನೆಯ ‘ಡಾನ್’ ಚಿತ್ರ ಮರುನಿರ್ಮಾಣಗೊಂಡಾಗ ಶಾರುಖ್ ನಾಯಕನ ಪಾತ್ರವನ್ನು ವಹಿಸಿದ್ದರು. ಚಿತ್ರದಲ್ಲಿ ‘ಖಾಯ್ ಕೆ ಪಾನ್ ಬನಾರಸವಾಲಾ ’ ಹಾಡಿಗೆ ಶಾರುಕ್ ಬಾಯಿಗೆ ಪಾನ್ ತುಂಬಿಕೊಂಡೇ ಹೆಜ್ಜೆ ಹಾಕಿದ್ದರು.