ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ, ಆ.3: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮತ್ತು ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಮಹಾನಗರ ಪಾಲಿಕೆ ಆವರಣದ ಮಹಾತ್ಮಗಾಂಧೀಜಿ ಪ್ರತಿಮೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ಇಡೀ ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳ ಮುಖಂಡರುಗಳ ಮೇಲೆ ಐಟಿ ಮತ್ತು ಸಿಬಿಐ ಮೂಲಕ ದಾಳಿ ನಡೆಸಿ ಬೆದರಿಸಿ ಇಡೀ ದೇಶವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ದೂರಿದರು.
ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳನ್ನು ಬೆಲೆಯೇರಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದು, ಇಂತಹ ಸರ್ಕಾರದ ವಿರುದ್ದ ದ್ವನಿ ಎತ್ತದಿದ್ದರೆ ಪ್ರಜಾತಂತ್ರ ವ್ಯವಸ್ಥೆ ಹಾಳಾಗಲಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಟಾರ್ಗೇಟ್ ಮಾಡಿ ಐಟಿ ಮತ್ತು ಸಿಬಿಐ ಮೂಲಕ ದಾಳಿ ನಡೆಸಲಾಗುತ್ತಿದೆ ಎಂದು ಅವರು ದೂರಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎ. ನಾಗರಾಜ್, ದಕ್ಷಿಣ ವಲಯ ಅಧ್ಯಕ್ಷ ಅಯೂಬ್ ಪೈಲ್ವಾನ್, ಉತ್ತರ ವಲಯ ಕಾಂಗ್ರೆಸ್ ಅಧ್ಯಕ್ಷ ಅಜ್ಜಂಪುರ ಮೃತ್ಯುಂಜಯ, ಪಾಲಿಕೆ ಉಪ ಮೇಯರ್ ಮಂಜಮ್ಮ ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಶ್ರೀನಿವಾಸ್, ಜಿ.ಬಿ.ಲಿಂಗರಾಜ್, ಬಸಪ್ಪ, ದಿಲ್‌ಶಾದ್ ಷೇಕ್‌ಅಹ್ಮದ್, ಸದಸ್ಯೆ ನಾಗರತ್ನಮ್ಮ, ಗೌಡ್ರು ರಾಜಶೇಖರ್, ಜೆ.ಎನ್. ಶ್ರೀನಿವಾಸ್, ತಿಪ್ಪಣ್ಣ, ಶ್ರೀಮತಿ ಆಶಾ ಉಮೇಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ತಕ್ಕಡಿ ಮಂಜುನಾಥ್, ಕೋಳಿ ಇಬ್ರಾಹಿಂ, ಸೇವಾದಳದ ಆಲೂರು ಡಿ.ಶಿವಕುಮಾರ್, ಎನ್‌ಎಸ್‌ಯುಐನ ಮುಜಾಹಿದ್, ಆವರಗೆರೆ ಕೆ.ಎಸ್. ರೇವಣ್ಣ, ಕೇರಂ ಗಣೇಶ್, ನಿಟುವಳ್ಳಿಯ ಪರಶುರಾಮ್, ಆಯಿಲ್ ರಾಜು, ಆಲೂರು ಸೋಮಣ್ಣ, ಶಾಮನೂರು ಕುಮಾರ್, ಅನಿಲ್ ಗೌಡ್ರು, ಚಂದನ್, ರವಿ.ಎಸ್, ಕಾಳಿಂಗರಾಜ್, ಆರೀಫ್, ನಸ್ರುಲ್ಲಾ, ದ್ರಾಕ್ಷಾಯಣಮ್ಮ, ಅನುಸೂಯಮ್ಮ, ಮತ್ತಿತರರು ಭಾಗವಹಿಸಿದ್ದರು.







