ಆತ್ಮವಿಶ್ವಾಸ ನೀಡುವ ಕಲಿಕೆ ಸಾರ್ಥಕ : ಪ್ರೊ. ವೆಂಕಟ್ರಮಣ ಭಟ್

ಪುತ್ತೂರು,ಆ.03: ನಮ್ಮೊಳಗಿನ ಜ್ಞಾನ ಸದಾ ಸಮಾಜದಲ್ಲಿನ ಅಭಿವೃದ್ಧಿಯೊಂದಿಗೆ ಬೆಳೆಯಬೇಕು. ನಾವು ಗಳಿಸಿದ ಅಂಕಗಳು ನಮ್ಮ ನೈಪುಣ್ಯತೆಗೆ ಒಂದು ಮಾನದಂಡವಷ್ಟೇ. ಜೀವನ ನಡೆಸಲು ಅದೊಂದೇ ಸಾಕಾಗುವುದಿಲ್ಲ. ಯಾವ ಸಂದರ್ಭದಲ್ಲಿಯೂ ಬದುಕು ಮುನ್ನಡೆಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ನಾವು ಕಲಿಕೆಯಿಂದ ಪಡೆದುಕೊಂಡಾಗ ಆ ಕಲಿಕೆ ಸಾರ್ಥಕವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟ್ರಮಣ ಭಟ್ ಅವರು ಹೇಳಿದರು.
ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಶಿಕ್ಷಣ ಕೇಂದ್ರದಲ್ಲಿ ಎಂ.ಕಾಂ, ರಸಾಯನ ಶಾಸ್ತ್ರ ಎಂ.ಎಸ್ಸಿ ಹಾಗೂ ಪತ್ರಿಕೋದ್ಯಮ ಎಂ.ಎ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮಾತನಾಡಿ, ಶೈಕ್ಷಣಿಕ ಜೀವನ ಕೇವಲ ಮನೋರಂಜನೆಗಷ್ಟೇ ಸೀಮಿತವಾಗಬಾರದು. ನಮ್ಮ ಮುಂದಿನ ಬದುಕಿಗೆ ಉತ್ತಮ ಅಡಿಪಾಯವನ್ನು ಹಾಕಿಕೊಳ್ಳುವ ಕೆಲಸವಾಗಬೇಕು. ಯಶಸ್ಸು ಎಂಬುದು ನಮ್ಮ ಪರಿಶ್ರಮದ ಮೇಲೆ ನಿಂತಿದ್ದು, ಬದುಕಿಗೊಂದು ಶಿಸ್ತು ಇದ್ದಾಗ ಅದು ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.
ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಕಾರಂತ್ ಅವರು ಮಾತನಾಡಿ ಸಾಧನೆಗೆ ಪರಿಶ್ರಮ, ಕಲಿಕೆ, ಚಿಂತನೆ ಎಂಬ ತಪಸ್ಸಿನ ಅಗತ್ಯವಿದೆ. ನಾವು ಏನು ಕಲಿಯುತ್ತಿದ್ದೇವೆ ಹಾಗೂ ಯಾಕಾಗಿ ಕಲಿಯುತ್ತೇವೋ ಎಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು ಎಂದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ವಿಜಯ ಸರಸ್ವತಿ ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ.ಸವಿತಾ ವಂದಿಸಿದರು. ವಾಣಿಜ್ಯ ಪ್ರಾಧ್ಯಾಪಕ ಪ್ರೊ.ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







