ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕ.ರ.ವೇ ಪ್ರತಿಭಟನೆ

ದಾವಣಗೆರೆ, ಆ.3: ನಗರದಲ್ಲಿರುವ ಆಂಗ್ಲ ನಾಮಫಲಕಗಳನ್ನು ಈ ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಗುರುವಾರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪ್ರತಿಭಟನಾಕಾರರು ಮೇಯರ್ ಅನಿತಾಬಾಯಿ ಹಾಗೂ ಪಾಲಿಕೆ ಆಯುಕ್ತ ನಾರಾಯಣಪ್ಪ ಅವರಿಗೆ ಮನವಿ ನೀಡುವ ಜೊತೆಗೆ ಆಂಗ್ಲ ನಾಮಫಲಕಗಳಿಗೆ ಕರಿ ಬಣ್ಣ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕನ್ನಡವಿಲ್ಲದ ನಾಮಫಲಕಗಳಿಗೆ ಮಸಿ ಬಳಿದು ಜಾಹೀರಾತು ಫಲಕಗಳನ್ನು ಹರಿದು ಹಾಕಿದರು ಸಹ ಕೆಲವು ಕನ್ನಡ ನಾಡ ದ್ರೋಹಿಗಳು ಪುನಃ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ನಾಮಫಲಕ ಹಾಕಿಕೊಂಡಿದ್ದಾರೆ. ಸರ್ಕಾರದ ಅಧಿಸೂಚನೆ ಆಧಾರದ ಮೇಲೆ ಮತ್ತು ಕನ್ನಡದ ಅಭಿವೃದ್ಧಿ ಪ್ರಾಧಿಕಾರದ ಆದೇಶದ ಮೇರೆಗೆ ಕನ್ನಡದಲ್ಲಿ ವ್ಯಾವಹಾರಿಸಬೇಕು ಮತ್ತು ಕನ್ನಡದಲ್ಲಿಯೇ ನಾಮಫಲಕಗಳನ್ನು ಹಾಕಬೇಕು ಎನ್ನುವ ನಿಯಮವಿದ್ದರು ಸಹ ಪಾಲಿಕೆ ಅಧಿಕಾರಿಗಳು ಶಾಮಿಲಾಗಿ ಹಿಂದಿ ಮತ್ತು ಇಂಗ್ಲೀಷ್ ನಾಮಫಲಕಗಳನ್ನು ಹಾಕಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.
ನಗರ ಪಾಲಿಕೆ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಆಂಗ್ಲ ನಾಮಫಲಕಗಳು ರಾರಾಜಿಸುತ್ತಿದ್ದು, ಇದರಿಂದ ಇತಿಹಾಸವುಳ್ಳ ನಗರಕ್ಕೆ ಮತ್ತು ಕನ್ನಡಕ್ಕೆ ಕಪ್ಪು ಚುಕ್ಕಿಯಾಗಿದೆ. ಆದ್ದರಿಂದ ಇವುಗಳನ್ನು ತೆರವುಗೊಳಿಸುವ ಕರ್ತವ್ಯ ಕನ್ನಡಿಗರಾದ ನಿಮ್ಮ ಕರ್ತವ್ಯವು ಇದೆ ಎಂದು ಮೇಯರ್ ಮತ್ತು ಆಯುಕ್ತರಿಗೆ ತಿಳಿಸಿದರು.
ನಗರದಲ್ಲಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಹಿಂದಿ, ಉರ್ದು ಮತ್ತು ಇಂಗ್ಲೀಷ್ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಅಂಗಡಿಯ ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಿ ಶೇ. 80ರಷ್ಟು ಕನ್ನಡ ನಾಮಫಲಕ ಮತ್ತು ಜಾಹೀರಾತುಗಳನ್ನು ಹಾಕಲು ನಿರ್ದೇಶಿಸಬೇಕು. ಸಮಯ ಕೇಳಿದಂತೆ 15 ದಿನಗಳ ಒಳಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ವೇದಿಕೆ ಮಹಿಳಾ ಘಟಕದಿಂದ ಅಧಿಕಾರಿಗಳಿಗೆ ಸೀರೆ ಬಳೆ, ಕುಪ್ಪಸ ನೀಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಎಸ್. ಈಶ್ವರ್, ಮಂಜುಶ್ರೀ ಗೌಡ, ಎಂ.ವಿ. ಶಂಕರನಾಂದ, ಖಾದರ್ ಬಾಷಾ, ಇಮ್ತಿಯಾಜ್, ವಿ. ಮಲ್ಲೇಶ್, ಸೋಮಶೇಖರ್, ಬಿ.ಎಂ. ಮಂಜುನಾಥ್ ಸ್ವಾಮಿ, ಎಚ್. ಧರ್ಮರಾಜ್, ಎನ್.ಐ. ಹನುಮಂತಪ್ಪ, ಎ.ಎಚ್. ತಿಪ್ಪೇಶ್, ಡಿ. ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.







