ಪ್ಲಾಸ್ಟಿಕ್ ಧ್ವಜ ಮಾರಾಟದ ವಿರುದ್ದ ಕ್ರಮಕ್ಕೆ ಆಗ್ರಹ: ಹಿಂದೂ ಜನಜಾಗೃತಿ ಸಮಿತಿಯಿಂದ ಅಧಿಕಾರಿಗಳಿಗೆ ಮನವಿ

ಪುತ್ತೂರು,ಆ.3 : ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ದಿನಾಚರಣೆಯ ನಿಮಿತ್ತ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಮತ್ತು ರಾಷ್ಟ್ರಧ್ವಜದ ಗೌರವ ಕಾಪಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬುಧವಾರ ಪುತ್ತೂರು ತಹಶೀಲ್ದಾರರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಮಾಧವ ರೈ ಕುಂಬ್ರ, ಪ್ರಶಾಂತ್, ಕೃಷ್ಣ ಕುಮಾರ್ ಶರ್ಮ, Áಂತಪ್ಪ ಗೌಡ, ಚಂದ್ರಶೇಖರ್, ಪ್ರಶಾಂತ್ ಎನ್ಮಾಡಿ, ಧರ್ಣಪ್ಪ, ರಮೇಶ, ಇಂದಿರಾ, ಚೇತನಾ, ದಿವ್ಯಾ, ಕೇಶವ ಗೌಡ ಮತ್ತಿತರರು ಉಪವಿಭಾಗಾಧಿಕಾರಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿ ಕಚೇರಿಯ ಮೆನೇಜರ್ ಬಾಬು ನಾಯ್ಕ್ ಅವರ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ್ಯ ದಿನದಂದು ಎಲ್ಲಾ ಕಡೆ ಧ್ವಜವಂದನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಅದೇ ದಿನ ಮಧ್ಯಾಹ್ನ ಬಳಿಕ ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕ್‍ನ ರಾಷ್ಟ್ರಧ್ವಜಗಳು ಛಿದ್ರಛಿದ್ರವಾಗಿ ಬಿದ್ದಿರುತ್ತವೆ. ಅದಲ್ಲದೆ ಪ್ಲಾಸ್ಟಿಕ್ ತಕ್ಷಣ ನಾಶವಾಗದ ಕಾರಣ ಬಹಳ ದಿನಗಳ ತನಕ ರಾಷ್ಟ್ರಧ್ವಜದ ಅವಮಾನವನ್ನು ಕಾಣಬೇಕಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರಧ್ವಜದ ಅವಮಾನವಾಗಬಾರದೆಂದು ಸರ್ಕಾರವು ತೆಗೆದುಕೊಂಡ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಪ್ಲಾಸ್ಟಿಕಿನ ರಾಷ್ಟ್ರಧ್ವಜ, ಬಿಲ್ಲೆ, ಹಾಗೂ ಇತರ ವಸ್ತುಗಳನ್ನು ಉತ್ಪಾದನೆ ಮಾಡುವವರು, ವಿತರಕರು ಮತ್ತು ಮಾರಾಟಗಾರರು ಕಾಯಿದೆಯ ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮೂಲಕ ತಹಶೀಲ್ದಾರ್ ಅವರನ್ನು ಆಗ್ರಹಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ
ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ತ್ರಿವರ್ಣ ಧ್ವಜಕ್ಕಾಗುವ ಅವಮಾನವನ್ನು ತಡೆಗಟ್ಟುವುದಕ್ಕಾಗಿ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿಯವರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಮುಖ್ಯ ಶಿಕ್ಷಕರ ಗಮನಕ್ಕೆ ಈ ವಿಚಾರವನ್ನು ತರುತ್ತೇವೆ, ರಾಷ್ಟ್ರಧ್ವಜ ಗೌರವ ಕಾಪಾಡಲು ಒಟ್ಟಾಗಿ ಕಾರ್ಯ ಮಾಡೋಣ, ರಾಷ್ಟ್ರಧ್ವಜ ಜಾಗೃತಿಗೆ ಸಂಬಂಧಿಸಿದ ವೀಡಿಯೋವನ್ನು ಎಲ್ಲರಿಗೂ ಕಳಿಸುವ ಆಯೋಜನೆ ಮಾಡುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಅವರು ಭರವಸೆ ನೀಡಿದ್ದಾರೆ ಎಂದು ಹಿಂದೂ ಜಾಗೃತಿ ಸಮಿತಿಯವರು ತಿಳಿಸಿದ್ದಾರೆ.







