ಪುರಸಭೆಯ ಅಧ್ಯಕ್ಷರಾಗಿ ರತ್ನಮ್ಮ ಸೂರ್ಯಕಾಂತಪ್ಪ ಆಯ್ಕೆ

ಶಿಕಾರಿಪುರ, ಆ.3: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ರತ್ನಮ್ಮ ಸೂರ್ಯಕಾಂತಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
23 ಸದಸ್ಯರ ಪುರಸಭೆಯಲ್ಲಿ 17 ಸದಸ್ಯರನ್ನು ಬಿಜೆಪಿ ಹೊಂದಿದ್ದು, ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದ 2.5 ವರ್ಷದ ಪ್ರಥಮ ಅವಧಿಯಲ್ಲಿ ಬಿಜೆಪಿಯ ಗೌರಮ್ಮ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅವಧಿಗೆ ಪ್ರಥಮ 10 ತಿಂಗಳು ರೂಪಕಲಾ ಹೆಗ್ಡೆ ಅಧ್ಯಕ್ಷರಾಗಿದ್ದು, ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಬುಧವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಪಟ್ಟಣದ ಕಾನೂರು ಹೊಸಕೇರಿ 11 ನೇ ವಾರ್ಡನ ಸದಸ್ಯೆ ರತ್ನಮ್ಮ ಸೂರ್ಯಕಾಂತಪ್ಪ ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ತಹಸೀಲ್ದಾರ್ ಶಿವಕುಮಾರ್ ರತ್ನಮ್ಮ ರವರ ಆಯ್ಕೆ ಅವಿರೋಧ ಎಂದು ಘೋಷಿಸಿದರು.
ಪುರಸಭೆಯ ಸಭಾಂಗಣದಲ್ಲಿ ನಡೆದ ನೂತನ ಪುರಸಭಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಮಾತನಾಡಿ, ಅವಿರೋಧ ಆಯ್ಕೆ ಸದಸ್ಯರ ಉತ್ತಮ ನಡವಳಿಕೆಯಾಗಿದ್ದು, ಸಾಗರದ ನಗರಸಭೆ ಮೀರಿಸುವ ಆಸ್ತಿ ಪಟ್ಟಣದ ಪುರಸಭೆಗಿರುವುದರಿಂದ ಸದಸ್ಯರ ಒಗ್ಗಟ್ಟು ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯ ಕೆ.ಜಿ ವಸಂತಗೌಡ ಮಾತನಾಡಿ, ಪುರಸಭೆಯ ಉತ್ತಮ ಕಾರ್ಯಕ್ಕೆ ವಿರೋಧ ಪಕ್ಷದ ಸಹಕಾರ ಅತ್ಯಗತ್ಯವಾಗಿದ್ದು, ಲೋಪಗಳನ್ನು ಗುರುತಿಸಿ ಎಚ್ಚರಿಸುವ ಮೂಲಕ ಉತ್ತಮ ಸೇವೆಗೆ ಸಹಕರಿಸುವಂತೆ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಎಲ್ಲಪ್ಪ ಮಾತನಾಡಿ, ಉತ್ತಮ ಕಾರ್ಯಕ್ಕೆ ಸಹಕರಿಸುವ ಸಂಪ್ರದಾಯ ವಿರೋಧ ಪಕ್ಷದಲ್ಲಿದ್ದು ತಾರತಮ್ಯಕ್ಕೆ ಅವಕಾಶವಿಲ್ಲದೆ ಅಭಿವೃದ್ದಿ ಕಾಮಗಾರಿಗೆ ಸೂಚಿಸಿದರು.
ಕಾರ್ಯಕರ್ತರು,ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಿಸಿದರು. ಉಪಾಧ್ಯಕ್ಷೆ ಫೈರೋಜಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜಗೌಡ, ಟಿ.ಎಸ್ ಮೋಹನ್, ಚಾರ್ಗಲ್ಲಿ ಪರಶುರಾಮ, ಪಾಲಾಕ್ಷಪ್ಪ,ರವೀಂದ್ರದೂಪದಹಳ್ಳಿ, ಪದ್ಮಾ, ರೂಪಕಲಾ ಹೆಗ್ಡೆ, ಮಧು, ಅಂಗಡಿ ಜಗದೀಶ, ನಿಜಲಿಂಗಪ್ಪ, ಜಿ.ಪಂ ಸದಸ್ಯೆ ರೇಣುಕಾ,ಮುಖಂಡ ಗುರುಮೂರ್ತಿ, ಹಾಲಪ್ಪ, ನಾಗರಾಜಪ್ಪ, ಚನ್ನವೀರಪ್ಪ ಮುಖ್ಯಾಧಿಕಾರಿ ಬಾಲಾಜಿರಾವ್ ಸಿಬ್ಬಂದಿ ಉಪಸ್ಥಿತರಿದ್ದರು.







