ಬೆಳ್ತಂಗಡಿ : ಒಂಬತ್ತು ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ

ಬೆಳ್ತಂಗಡಿ,ಆ.3: ಕುದುರೇಮುಖ ರಾಷ್ಟ್ರೀಯ ಉಧ್ಯಾನವನದೊಳಗಿರುವ ಸವಣಾಲು, ನಡ ಗ್ರಾಮಗಳಿಗೆ ಸೇರಿದ ಕಂಬುಜೆ, ಪಿಲಿಕಲ ಪ್ರದೇಶಗಳ ಕುಟುಂಬಗಳಿಗೆ ದಶಕಗಳ ಕಾಲದ ಹೋರಾಟದ ಬಳಿಕ ಕೊನೆಗೂ ವಿದ್ಯುತ್ ಸಂಪರ್ಕ ದೊರೆತಿದ್ದು ಬೆಳ್ತಂಗಡಿ ಶಾಸಕ ಕೆ.ವಸಂತಬಂಗೇರ ಅವರು ಪಿಲಿಕಲದ ಮಹಾಬಲ ಮಲೆಕುಡಿಯ ಅವರ ಮನೆಯಲ್ಲಿ ಗುರುವಾರ ಒಂಬತ್ತು ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಂಗೇರ ಅವರು ದ.ಕ ಜಿಲ್ಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಆದಿವಾಸಿ ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಸುಮಾರು 23 ಲಕ್ಷ ರೂ. ವೆಚ್ಚದ ವಿದ್ಯುತ್ತೀಕರಣ ಯೋಜನೆಯನ್ನು ಕೈಗೊಳ್ಳಲಾಗಿತ್ತು. ತಾಲೂಕಿನ ಇನ್ನೂ ಹಲವು ಪ್ರದೇಶಗಳಲ್ಲಿ ಇದೇರೀತಿ ಸೌಲಭ್ಯ ವಂಚಿತರಿದ್ದು ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗಿರುವ ಎಲ್ಲ ಗ್ರಾಮಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುವುದು. ನನ್ನ ಅವಧಿಯಲ್ಲಿ ತಾಲೂಕಿನ ಎಲ್ಲಾ ಮನೆಗಳು ವಿದ್ಯುತ್ ನಿಂದ ಬೆಳಗುವಂತಾಗಬೇಕು ಎಂಬುದು ನನ್ನ ಗುರಿಯಾಗಿದೆ. ಈಗಾಗಲೇ ಶೇ. 95 ಮನೆಗಳು ವಿದ್ಯುತ್ ಸಂಪರ್ಕ ಹೊಂದಿದ್ದು, ಉಳಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಮಾಡಲಾಗುವುದು ಎಂದರು.
ಜಿ.ಪಂ.ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ, ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ತಾಲೂಕಿನಲ್ಲಿ ಅತೀ ಹೆಚ್ಚು ಆದಿವಾಸಿ, ದಲಿತ ಸಮುದಾಯದ ಕಾಲನಿಗಳು ಅಭಿವೃದ್ಧಿಗೊಂಡಿದ್ದು, ದಲಿತ, ಆದಿವಾಸಿ ಪ್ರದೇಶಗಳ ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಮೆಸ್ಕಾಂ ಕಾರ್ಯವಾಹಕ ಅಭಿಯಂತಕರಾದ ಶಿವಶಂಕರ್ ಅವರು, ಸುಮಾರು 23 ಲಕ್ಷ ವೆಚ್ಚದ ವಿದ್ಯುತ್ತೀಕರಣ ಯೋಜನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 1 ಕಿ.ಮೀ ದೂರ ಎಬಿ ಕೇಬಲ್ ಅಳವಡಿಸಲಾಗಿದೆ. 1 ಕಿ.ಮೀ ಎಚ್‍ಟಿ ಲೈನ್, 2 ಕಿ.ಮೀ ಎಲ್‍ಟಿ ಲೈನ್ ಎಳೆಯಲಾಗಿದೆ. 25 ಕೆವಿ ಸಾಮಥ್ರ್ಯದ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿದ್ದು, ಎಬಿ ಕೇಬಲ್ ಅಳವಡಿಕೆಯಿಂದ ಮರದ ಕೊಂಬೆಗಳು ಬಿದ್ದರೂ ಯಾವುದೇ ತೊಂದರೆ ಸಂಭವಿಸುವುದಿಲ್ಲ ಎಂದರು.
ಇದೇ ಸಂದರ್ಭ ವಿದ್ಯುತ್ ಸಂಪರ್ಕ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ ಶಾಸಕ ಬಂಗೇರ ಅವರನ್ನು ಸನ್ಮಾನಿಸಲಾಯಿತು. ತಾ.ಪಂ ಉಪಾಧ್ಯಕ್ಷೆ ವೇದಾವತಿ , ತಾ.ಪಂ.ಸದಸ್ಯೆ ಜಯಶೀಲ, ನಡ ಗ್ರಾ ಪಂ ಅಧ್ಯಕ್ಷೆ ಪೂರ್ಣಿಮ, ಮಸ್ಕಾಂ ಇಂಜಿನಿಯರ್ ಸಜಿ ಕುಮಾರ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು. ಜಯಾನಂದ ಪಿಲಿಕಲ, ದಲಿತ ಮುಖಂಡ ಬಿ. ಕೆ. ವಸಂತ್ ಬೆಳ್ತಂಗಡಿ, ದಲಿತ ಹಕ್ಕುಗಳ ಹೋರಾಟಗಾರ ಶೇಖರ್ ಲಾಯಿಲ ಹಾಗೂ ನಡ, ಸವಣಾಲು ಗ್ರಾಮದ ಗ್ರಾ.ಪಂ ಸದಸ್ಯರುಗಳು ಇದ್ದರು.
ಕುದುರೇಮುಖ ರಾಷ್ಟ್ರೀಯ ಉಧ್ಯಾನವನದೊಳಗೆ ಯಾವುದೇ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲು ಅರಣ್ಯ ಇಲಾಖೆ ಸದಾ ಅಡ್ಡಿಪಡಿಸುತ್ತಾ ಬಂದಿದ್ದು ಇಲ್ಲಿನ ನಿವಾಸಿಗಳಿಗೆ ಅಬಿವೃದ್ದಿಯೆಂಬುದು ಮರೀಚಿಕೆಯಾಗಿತ್ತು. ಇದೀಗ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಅನುಮತಿಯನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕಾಮಗಾರಿಯಾಯಗಿ ವ್ಯಾಪ್ತಿಯ ಸವಣಾಲು- ನಡ ಗ್ರಾಮದ ಕಂಬುಜೆ, ಪಿಲಿಕಲ ಪ್ರದೇಶದಲ್ಲಿ 9 ಮಲೆಕುಡಿಯ ಕುಟುಂಬಗಳಿಗೆ ವಿಧ್ಯುತ್ ಸಂಪರ್ಕ ಒದಗಿಸಲಾಗಿದೆ. ತಾಲೂಕಿನ ಹನ್ನೊಂದು ಗ್ರಾಮಪಂಚಾಯತುಗಳ ವ್ಯಾಪ್ತಿಯಲ್ಲಿ ಕುದುರೇಮುಖ ರಾಷ್ಟ್ರೀಯ ಉಧ್ಯಾನವನವಿದ್ದು ಇದರೊಳಗೆ ನೂರಾರು ಕುಟುಂಬಗಳು ವಾಸಿಸುತ್ತಿದೆ ಇವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅರಣ್ಯಕಾಯ್ದೆ ಅಡ್ಡಿಯಾಗುತ್ತಿದ್ದು ಇದೀಗ ಪಿಲಿಕಳದಲ್ಲಿ ಮೊದಲ ಬಾರಿಗೆ ಅರಣ್ಯದೊಳಗೆ ಕಾಮಗಾರಿ ನಡೆದಿದ್ದು ಇತರೆ ಗ್ರಾಮಗಳ ಮೂಲನಿವಾಸಿಗಳಲ್ಲಿಯೂ ಹೊಸ ಆಶಾಭಾವನೆ ಹುಟ್ಟಿಸಿದೆ.
ನಾವೂ ಇತರಂತೆ ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪಡೆಯಬೇಕು ನಮಗೂ ಟಿ.ವಿ ನೋಡಬೇಕು, ಇತರೆ ಆಧುನಿಕ ಉಪಕರಣಗಳು ನಮ್ಮ ಮನೆಗಳಲ್ಲಿಯೂ ಇರಬೇಕು ಎಂಬ ಕನಸುಕಾಣಲು ಆರಂಭಿಸಿ ವರ್ಷಗಳೇ ಕಳೆದಿದೆ. ಅದಕ್ಕಾಗಿ ಮಾಡದ ಪ್ರಯತ್ನಗಳಿಲ್ಲ ಇದೀಗ ಕೊನೆಗೂ ಎಲ್ಲರ ಪ್ರಯತ್ನದ ಫಲವಾಗಿ ನಮ್ಮ ಮನೆಗೂ ಕರೆಂಟುಬಂದಿದೆ ನಾವೂ ಆಧುನಿಕ ಬದುಕನ್ನು ನಡೆಸಬಹುದಾಗಿದೆ. ಇದು ಕೇವಲ ಇಲ್ಲಿಗೆ ನಿಲ್ಲಬಾರದು ಎಲ್ಲ ಮೂಲನಿವಾಸಿಗಳ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ದೊರಕಬೇಕು.
ಜಯಾನಂದ ಪಿಲಿಕಲ, ಸ್ಥಳೀಯ ನಿವಾಸಿ.







