ಡೋಕಾ ಲಾ ದಲ್ಲಿ ಭಾರತದ ಸೈನಿಕರ ಸಂಖ್ಯೆ ಕಡಿಮೆಯಾಗಿಲ್ಲ: ಚೀನಾ ಹೇಳಿಕೆಗೆ ಭಾರತದ ಸ್ಪಷ್ಟನೆ

ಹೊಸದಿಲ್ಲಿ, ಆ.3: ಭಾರತೀಯ ಸೇನಾಪಡೆ ಡೋಕಾ ಲಾ ದಲ್ಲಿ ತನ್ನ ಸೈನಿಕರನ್ನು ಕ್ರಮೇಣ ಕಡಿಮೆಗೊಳಿಸುತ್ತಿದ್ದು 400ರಷ್ಟಿದ್ದ ಸೈನಿಕರ ಸಂಖ್ಯೆ ಇದೀಗ ಸುಮಾರು 40ಕ್ಕೆ ಸೀಮಿತಗೊಂಡಿದೆ ಎಂಬ ಚೀನಾದ ಹೇಳಿಕೆಯನ್ನು ನಿರಾಕರಿಸಿರುವ ಸರಕಾರ, ಅಲ್ಲಿ ಉಪಸ್ಥಿತರಿರುವ ಸೈನಿಕರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತಿಳಿಸಿದೆ.
ಡೋಕಾ ಲಾ ದಲ್ಲಿ ರಸ್ತೆ ನಿರ್ಮಿಸುವ ಕುರಿತು ಚೀನಾದ ಅಧಿಕಾರಿಗಳು ಭಾರತೀಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎಂದು ದಿಲ್ಲಿಯಲ್ಲಿ ಚೀನಾದ ರಾಯಭಾರ ಕಚೇರಿ ಬಿಡುಗಡೆಗೊಳಿಸಿರುವ 15 ಪುಟಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಆದರೆ ಚೀನಾದ ಸೇನೆ ಯಾವುದೇ ಸೂಚನೆ ನೀಡದೆ ಜೂನ್ 16ರಂದು ಏಕಾಏಕಿ ರಸ್ತೆ ನಿರ್ಮಿಸಲು ಮುಂದಾಗಿದೆ ಎಂಬುದು ಭಾರತೀಯ ಅಧಿಕಾರಿಗಳ ಹೇಳಿಕೆಯಾಗಿದೆ).
ಅಲ್ಲದೆ ಭಾರತೀಯ ಸೇನೆ ಸಿಕ್ಕಿಂನ ಡೋಕಾ ಲಾ ದಲ್ಲಿ ಗಡಿ ಉಲ್ಲಂಘಿಸಿದ್ದು ಭಾರತ ತಕ್ಷಣ ತನ್ನ ಸೇನೆಯನ್ನು ಹಿಂಪಡೆಯಬೇಕು ಮತ್ತು ಗಡಿ ಉಲ್ಲಂಘನೆ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಜೂನ್ 16ರಂದು ಚೀನಾದ ಪಡೆಗಳು ಡೋಂಗ್ ಲಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ್ದು ಜೂನ್ 18ರಂದು 270ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಭಾರತೀಯ ಯೋಧರು ಎರಡು ಬುಲ್ಡೋಝರ್ ಸಹಿತ ಸಿಕ್ಕಿಂ ಭಾಗದ ಡೋಕಾ ಲಾ ದಲ್ಲಿ ಗಡಿ ಉಲ್ಲಂಘಿಸಿ, ಚೀನಾದ ಭೂಪ್ರದೇಶದೊಳಗೆ ಸುಮಾರು 100 ಮೀಟರ್‌ನಷ್ಟು ಮುಂದೊತ್ತಿ ಬಂದಿವೆ. ಚೀನಾದ ರಸ್ತೆ ನಿರ್ಮಾಣ ಕಾಮಗಾರಿಗೆ ಭಾರತೀಯ ಯೋಧರು ಅಡ್ಡಿಪಡಿಸಿದ ಕಾರಣ ಈ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆ. ಅಲ್ಲದೆ, ಒಂದು ಹಂತದಲ್ಲಿ ಸುಮಾರು 400 ಭಾರತೀಯ ಯೋಧರು ಗಡಿ ಉಲ್ಲಂಘಿಸಿ 180 ಮೀಟರ್‌ನಷ್ಟು ಚೀನಾದ ಭೂಪ್ರದೇಶದೊಳಗೆ ಸಾಗಿ ಬಂದು ಅಲ್ಲಿ ಮೂರು ಟೆಂಟ್‌ಗಳನ್ನು ನಿರ್ಮಿಸಿದ್ದರು. ಜುಲೈ ಅಂತ್ಯದ ವೇಳೆ ಇಲ್ಲಿ ಇನ್ನೂ ಸುಮಾರು 40ರಷ್ಟು ಭಾರತೀಯ ಯೋಧರು ಹಾಗೂ ಒಂದು ಬುಲ್ಡೋಝರ್ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಭಾರತದ ಅಧಿಕಾರಿಗಳು, ಡೋಕಾ ಲಾ ದಲ್ಲಿ ಈಗ ಸುಮಾರು 350 ಭಾರತೀಯ ಯೋಧರು ಹಾಗೂ 300ರಷ್ಟು ಚೀನಾ ಯೋಧರಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣ ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾರತದ ನಿಲುವನ್ನು ನಮ್ಮ ಜೂನ್ 30ರ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಚೀನಾದ ಜೊತೆಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಸುಗಮವಾಗಿ ಮುಂದುವರಿಯಲು ಭಾರತ-ಚೀನಾ ಗಡಿಪ್ರದೇಶದಲ್ಲಿ ನೆಮ್ಮದಿ ಮತ್ತು ಶಾಂತಿಯ ಪರಿಸ್ಥಿತಿ ನೆಲೆಸುವ ಅಗತ್ಯವಿದೆ ಎಂಬುದು ಭಾರತದ ಅಭಿಪ್ರಾಯವಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆ ಸ್ಪಷ್ಟಪಡಿಸಿದೆ.







