ವಿದ್ಯಾರ್ಥಿಗಳಿಗೆ ದೌರ್ಜನ್ಯಗಳ ಜಾಗೃತಿ ಮೂಡಿಸಲು ಶಕುಂತಳಾ ಶೆಟ್ಟಿ ಸೂಚನೆ

ಮಂಗಳೂರು, ಆ.3: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯಬಹುದಾದ ದೌರ್ಜನ್ಯಗಳ ಬಗ್ಗೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಸೂಚನೆ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಮೇಲೆ ನಡೆಯಬಹುದಾದ ದೌರ್ಜನ್ಯಗಳು, ಕಿರುಕುಳಗಳ ಬಗ್ಗೆ ಪ್ರತಿ ನಿತ್ಯ ಅರಿವು ಮೂಡಿಸಬೇಕು. ಇದರಿಂದ ಇಂತಹ ಪ್ರಕರಣಗಳು ನಡೆದಲ್ಲಿ ಧೈರ್ಯದಿಂದ ಮುಂದೆ ಬಂದು ಹೇಳಲು ಪ್ರೇರೇಪಣೆ ಸಿಗುತ್ತದೆ. ಹೀಗಾಗಿ ಇಂತಹ ಪ್ರಕರಣಗಳ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬಹುದಾಗಿದೆ ಎಂದು ಶಕುಂತಳಾ ಶೆಟ್ಟಿ ಹೇಳಿದರು.
ಅಂಗನವಾಡಿಗಳ ವಿದ್ಯುತ್ ಬಿಲ್ ಪಾವತಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಶಿಶು ಅಭಿವೃದ್ಧಿ ಅಧಿಕಾರಿಗಳು ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಗರ-ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳ ವಿದ್ಯುತ್ ಬಿಲ್ಲನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳು ಭರಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಹಾಗೂ ಕೌಟುಂಬಿಕ ಹಿಂಸೆಯಿಂದ ಮನೆ ಬಿಟ್ಟು ಹೋಗಿ ಪತ್ತೆಯಾದವರಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಅಡುಗೆ ಕೆಲಸಕ್ಕೆ ಗುತ್ತಿಗೆಯಾಧಾರಿತವಾಗಿ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ತಿಳಿಸಿದರಲ್ಲದೆ, ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರು ಠಾಣಾ ವ್ಯಾಪ್ತಿಗೆ ಸಂಬಂದಪಟ್ಟಂತೆ ದೂರುದಾರರನ್ನು ಅಲೆದಾಡಿಸದೆ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬಾಲ್ಯ ವಿವಾಹ ತಡೆಗಟ್ಟಲು ಬಿಗಿಯಾದ ಕಾನೂನಿದ್ದರೂ, ಗೌಪ್ಯವಾಗಿ ಬಾಲ್ಯ ವಿವಾಹ ನಡೆಯುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ಅಧಿಕಾರಿಗಳ 4 ತಂಡ ರಚಿಸಿ, ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ಬಂದಲ್ಲಿ ತಕ್ಷಣ ಅಲ್ಲಿಗೆ ಭೇಟಿ ನೀಡಿ ಅದನ್ನು ತಡೆಯುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಸೂಚಿಸಿದರು.
ಗೌಪ್ಯವಾಗಿ ಬಾಲ್ಯ ವಿವಾಹವಾಗಿ, 18 ವರ್ಷಕ್ಕಿಂತ ಕೆಳಗಿನ ಹೆಣ್ಣುಮಕ್ಕಳು ಗರ್ಭಿಣಿಯಾಗಿರುವ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಮಾಹಿತಿಯನ್ನು ಮಹಿಳಾ ಇಲಾಖೆಗೆ ತಕ್ಷಣ ನೀಡುವಂತೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ಸೂಚಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ, ಜಿಪಂ ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್, ನಾಗರಿಕ ಹಕ್ಕುಗಳ ನಿರ್ದೇಶನಾಲಯದ ಎಸ್ಪಿ ಡಾ. ವೇದಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಖಿಲ್ ಶೆಟ್ಟಿ ಮತ್ತಿತರರು ಇದ್ದರು.







