ಕೇಂದ್ರದ ಅಧಿಸೂಚನೆಯಿಂದ ಕೃಷಿಕರಿಗೆ ಅನ್ಯಾಯ: ಹಮೀದ್ ಇಡ್ನೂರ್
ಮಂಗಳೂರು, ಆ.3: ಕೊಡಗಿನ ಪುಷ್ಪಗಿರಿ ವನ್ಯಧಾಮದ ಸುರಕ್ಷತೆಗಾಗಿ ಪರಿಸರ ಸೂಕ್ಷ್ಮ ವಲಯ ವಿಸ್ತರಣೆಗೆ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಕರಡು ಅಧಿಸೂಚನೆ ಹೊರಡಿಸಿದ್ದು, ಇದರಿಂದ ಸುಳ್ಯ ತಾಲೂಕಿನ ಕಲ್ಮಕಾರು ಮತ್ತು ಬಾಳುಗೋಡು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇದರಿಂದ ಈ ಭಾಗದ ಕೃಷಿಕರಿಗೆ ತುಂಬಾ ಸಮಸ್ಯೆಯಾಗಲಿದೆ ಎಂದು ಕೊಲ್ಲಮೊಗ್ರು-ಕಲ್ಮಕಾರು ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಮೀದ್ ಇಡ್ನೂರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಪ್ರದೇಶಗಳ ಅರಣ್ಯ ಸಂರಕ್ಷಣೆಗಾಗಿ ಸೂಕ್ಷ್ಮ ಪ್ರದೇಶ ಗುರುತಿಸುವಿಕೆಗಾಗಿ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಭಾಗದಲ್ಲಿ ವಿವಿಧ ಯೋಜನೆಗಳು ಈಗಾಗಲೇ ಜಾರಿಯಾಗುವ ಹಂತದಲ್ಲಿದೆ. ಇದೀಗ ಜನವಸತಿ ಪ್ರದೇಶಗಳನ್ನು ಸೂಕ್ಷ್ಮ ವಲಯ ವಿಸ್ತರಣೆಗೆ ಬಳಸಿಕೊಳ್ಳುತ್ತಿರುವುದರಿಂದ ಕೃಷಿಯನ್ನೇ ನಂಬಿ ಬದುಕುವ ಮಂದಿಯ ಬದುಕು ದುಸ್ಥರವಾಗಲಿದೆ. ಸರಕಾರ ತಕ್ಷಣ ಈ ಗ್ರಾಮಗಳನ್ನು ಸೂಕ್ಷ್ಮ ವಲಯ ವ್ಯಾಪ್ತಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಕರಡು ಯೋಜನೆಯಲ್ಲಿ ತಿಳಿಸಿದಂತೆ ಜನವಸತಿ ಪ್ರದೇಶಗಳು ಸೂಕ್ಷ್ಮ ವಲಯವಾಗಿ ಗುರುತಿಸಿದಲ್ಲಿ ಆ ಸ್ಥಳಗಳಲ್ಲಿ ಹಲವಾರು ಕಾನೂನು ಜಾರಿಯಾಗಲಿದ್ದು, ರೈತರ ಕೃಷಿ ಭೂಮಿ, ರಸ್ತೆ, ನೀರು, ವಿದ್ಯುತ್ ಇತ್ಯಾದಿಗಳಿಂದ ವಂಚಿತರಾಗುವ ಆತಂಕವಿದೆ ಎಂದು ಹಮೀದ್ ಇಡ್ನೂರ್ ಹೇಳಿದರು.
ಜಿಪಂ ಮಾಜಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ, ಈ ಯೋಜನೆಯಂತೆ ಬಾಳುಗೋಡು ಮತ್ತು ಕಲ್ಮಕಾರು ಗ್ರಾಮ ವ್ಯಾಪ್ತಿಯ 2 ಕಿಮೀ ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸಲಿದ್ದು, ಸುಮಾರು 5 ಸಾವಿರ ಜನರು ಆತಂಕಿತರಾಗಿದ್ದಾರೆ. ಇಡೀ ಗ್ರಾಮಗಳೇ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡುವುದರಿಂದ ಜನತೆಯ ಬದುಕು ಅತಂತ್ರವಾಗಲಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಪ್ರದೀಪ್ ಕುಮಾರ್, ರೈತ ಮುಖಂಡ ವಸಂತ್ ಉಪಸ್ಥಿತರಿದ್ದರು.







