ಕಾಲೇಜು ಕಟ್ಟಡ ನಿರ್ಮಾಣಕ್ಕೆ ತೊಡಕಾಗಿರುವ ತಡೆಯಾಜ್ಞೆ ತೆರವಿಗೆ ಒತ್ತಾಯ
ಬೆಂಗಳೂರು, ಆ.3: ಕೆಂಗೇರಿ ಉಪನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಿಸಲು ತೊಡಕಾಗಿರುವ ಹೈಕೋರ್ಟ್‌ನ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು. ಹಾಗೂ ಶೀಘ್ರವಾಗಿ ಕಾಲೇಜಿನ ಕಟ್ಟಡ ನಿರ್ಮಾಣವಾಗಬೇಕೆಂದು ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕೆಂಗೇರಿ ಉಪನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ಹಲವು ದಶಕಗಳು ಕಳೆದಿವೆ. ಆದರೆ, ಇಲ್ಲಿಯವರೆಗೂ ಸಮರ್ಪಕವಾದ ಕಟ್ಟಡವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಲವು ಸಮಸ್ಯೆಯನ್ನು ಎದುರಿಸಬೇಕಾಯಿತು. ಇದನ್ನು ಗಮನಿಸಿದ ಸರಕಾರ 2013ರಲ್ಲಿ ಕಾಲೇಜು ಕಟ್ಟಡ ನಿರ್ಮಿಸಲು ಒಂದು ಸ್ಥಳವನ್ನು ಮಂಜೂರು ಮಾಡಿತು. ಆದರೆ, ಕಾಮಗಾರಿ ಪ್ರಾರಂಭವಾಗಿ ಕೆಲವೇ ದಿನದಲ್ಲಿ ಕೆಲವು ಪಟ್ಟಭದ್ರರು ಹೈಕೋರ್ಟ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆಯಾಜ್ಞೆ ತಂದರು. ಈ ತಡೆಯಾಜ್ಞೆಯಿಂದಾಗಿ ಕಟ್ಟಡ ನಿರ್ಮಾಣ ಪೂರ್ಣವಾಗದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಕೂಡಲೆ ತಡೆಯಾಜ್ಞೆಯನ್ನು ತೆರವುಗೊಳಸಬೇಕು ಎಂದು ಧರಣಿ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ವೇಳೆ ವಿದ್ಯಾರ್ಥಿ ಸಂಘಟನೆಯ ಮುಖಂಡ ರವಿ ಮಾತನಾಡಿ, ಕೆಂಗೇರಿ ಉಪನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ನೋಂದಾಣಿಯಾಗುತ್ತಿದ್ದಾರೆ. ಬಹುತೇಕ ಬಡವರ್ಗದ ವಿದ್ಯಾರ್ಥಿಗಳೇ ಈ ಕಾಲೇಜಿಗೆ ಬರುವುದರಿಂದ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಈ ಕಾಲೇಜಿನ ಮೇಲೆ ಉದಾಸೀನ ಭಾವನೆ ಬಂದಿದೆ ಎಂದು ವಿಷಾಧಿಸಿದರು. ಕೆಂಗೇರಿ ಉಪನಗರ ಸುತ್ತಮುತ್ತ ವಾಸಿಸುತ್ತಿರುವ ಬಡ ವರ್ಗದ ವಿದ್ಯಾರ್ಥಿಗಳಿಗೆ ಈ ಸರಕಾರಿ ಕಾಲೇಜು ಉಪಯುಕ್ತವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತೊಡಕಾಗಿರುವ ಹೈಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿ ಕಾಲೇಜಿನಲ್ಲಿ ಮೂಲಭೂತ ಅವಶ್ಯಕತೆಯನ್ನು ಪೂರೈಸಿಕೊಡಬೇಕೆಂದು ಅವರು ಒತ್ತಾಯಿಸಿದರು.







