'ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ' ಜಾಗೃತಿ ಜಾಥಾ ಕಾರ್ಯಕ್ರಮ

ಕಡೂರು, ಆ. 3: ಚಿಕ್ಕಮಗಳೂರು ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಮತ್ತು ತಾಲೂಕು ಜರ್ನಲಿಸ್ಟ್ ಯೂನಿಯನ್ ವತಿಯಿಂದ ಜಿಲ್ಲಾ ಪತ್ರಿಕಾ ದಿನಾಚರಣೆ ಪ್ರಯುಕ್ತ ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾದ ನಾರಾಯಣ್ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಥಾ ಕಾರ್ಯಕ್ರಮ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿ, ಜೈನ ಟೆಂಪಲ್ ರಸ್ತೆ, ಕೆಎಂಕೆ ವೃತ್ತ, ಬಸವೇಶ್ವರ ವೃತ್ತದ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ಸಮಾರಂಭ ನಡೆಯುವ ಹೋಟೆಲ್ ಸುರುಚಿಯನ್ನು ತಲುಪಿತು. ಈ ಸಂದರ್ಭ ಅಧ್ಯಕ್ಷ ನಾರಾಯಣ್ ಮಾತನಾಡಿ, ದೊಡ್ಡ ಮಟ್ಟದ ಪತ್ರಿಕಾ ಮಾಧ್ಯಮಗಳ ನಡುವೆ ಸಣ್ಣ ಮಟ್ಟದ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ನಿರಂತರವಾಗಿ ಹೋರಾಡುತ್ತಲೆ ಬರುತ್ತಿವೆ. ಸರಕಾರಗಳಿಂದಲೂ ಸಹ ಸಣ್ಣ ಮಟ್ಟದ ಪತ್ರಿಕೆಗಳ ಶೋಷಣೆಗಳು ಸದಾ ನಡೆಯುತ್ತಲಿದೆಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಯಕುಮಾರ್ ಮಾತನಾಡಿ, ಸಮಾಜದ ಆಗು-ಹೋಗುಗಳು ಮತ್ತು ಸರ್ಕಾರದ ಆಡಳಿತ ಯೋಜನೆಗಳ ತಲುಪುವಿಕೆಯಲ್ಲಿ ಆಗುತ್ತಿರುವ ಸಾಧಕ ಭಾಧಕಗಳ ಬಗ್ಗೆ ಜನರಲ್ಲಿ ಅರಿವು ಮೂಡಬೇಕಾದರೆ ಪತ್ರಿಕೆಗಳನ್ನು ಕೊಂಡು ಓದುವ ಮನೋಭಾವವನ್ನು ಪ್ರತಿಯೋರ್ವರೂ ಅಳವಡಿಸಿಕೊಂಡಾಗ ಮಾತ್ರ ದೇಶದ ಪ್ರಗತಿ ಮತ್ತು ಜನತಂತ್ರ ವ್ಯವಸ್ಥೆಯ ಯಶಸ್ಸಿನ ಬೆಳವಣಿಗೆ ಸಾದ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಡೂರು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಕೆ.ವಿ.ವಾಸು, ಅಧ್ಯಕ್ಷ ಸಿ.ಹೆಚ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಮಂಜಪ್ಪ, ಸದಸ್ಯರಾದ ಟಿ.ಪ್ರಕಾಶ್, ಬಾಲಕೃಷ್ಣ, ಟಿ.ಜಿ.ಲೋಕೆಶ್, ಕೆ.ಎಸ್.ಸೋಮಶೇಖರ್, ಪ್ರಸನ್ನಕುಮಾರ್, ಮುರುಗೇಶಪ್ಪ, ಶಿವಸ್ವಾಮಿ, ಎನ್.ಸೋಮಶೇಖರ್, ರಾಜು, ಶ್ರೀನಿವಾಸ್, ಓಂಕಾರಮೂರ್ತಿ, ಅಂತರಂಗ ಸೋಮಶೇಖರ್, ಗಿರೀಶ್, ಅಭಿಲಾಶ್, ನವೀನ್, ಕೃಷ್ಣಪ್ಪ ಭಾಗವಹಿಸಿದ್ದರು.







