ಆರ್‌ಟಿಇ ನಿಯಮ ಸಡಿಲಿಕೆ: ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆ

ಹೊಸದಿಲ್ಲಿ, ಆ.3: ವಿದ್ಯಾರ್ಥಿಗಳನ್ನು 6, 7 ಮತ್ತು 8ನೇ ತರಗತಿಗಳಲ್ಲಿ ಅನುತ್ತೀರ್ಣ ಗೊಳಿಸಬಾರದು ಎಂಬ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯ ಅನುಚ್ಛೇದವನ್ನು ಸಡಿಲಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇದರೊಂದಿಗೆ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಜಾರಿಗೆ ಬಂದ 8 ವರ್ಷದ ಬಳಿಕ ವಿದ್ಯಾರ್ಥಿಗಳನ್ನು 6,7 ಮತ್ತು 8ನೇ ತರಗತಿಯಲ್ಲಿ ಅನುತ್ತೀರ್ಣ ಗೊಳಿಸಲು ರಾಜ್ಯ ಸರಕಾರಗಳಿಗೆ ಅನುಮತಿ ದೊರೆತಿದೆ. ಈ ಕುರಿತು ಮಾನವ ಸಂಪನ್ಮೂಲ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವ ಸಂಪುಟ ಅನುಮೋದಿಸಿದೆ. 2010ರ ಮಾರ್ಚ್ 10ರಂದು ಜಾರಿಗೆ ಬಂದಿದ್ದ ಆರ್‌ಟಿಇ ಕಾಯ್ದೆಯ 16ನೇ ಪರಿಚ್ಛೇದದಲ್ಲಿ ಪ್ರಾಥಮಿಕ ಶಿಕ್ಷಣ(8ನೇ ತರಗತಿ) ಪೂರೈಸುವವರೆಗೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ ಮೊದಲ ಹಂತದಲ್ಲಿ ತೇರ್ಗಡೆಯಾಗಲು ವಿಫಲವಾಗುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮತ್ತೊಂದು ಅವಕಾಶ(ಪೂರಕ ಪರೀಕ್ಷೆ) ನೀಡಬೇಕು. ಆಗಲೂ ಆ ವಿದ್ಯಾರ್ಥಿಯ ಸಾಧನೆ ತೃಪ್ತಿಕರವಾಗಿಲ್ಲದಿದ್ದರೆ ಮಾತ್ರ ಫೇಲ್ ಮಾಡಬೇಕು .ಅಲ್ಲದೆ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯ ನಡುವಿನ ಅವಧಿಯಲ್ಲಿ ಆ ವಿದ್ಯಾರ್ಥಿಗೆ ಸುಧಾರಾತ್ಮಕ ತರಬೇತಿ ನೀಡಬೇಕು ಎಂದು ತಿಳಿಸಲಾಗಿದೆ.
ವಿವಿಧ ರಾಜ್ಯ ಸರಕಾರಗಳ ಕೋರಿಕೆ ಮೇರೆಗೆ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ. ಅನುತ್ತೀರ್ಣ ಗೊಳಿಸದಿರುವ ನಿಯಮದಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ವಿಷಯದಲ್ಲಿ ಅಸಡ್ಡತೆಯ ಭಾವನೆ ನೆಲೆಸುತ್ತದೆ ಎಂದು ಶಿಕ್ಷಣದ ವಿಷಯದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಲಹೆ ನೀಡುವ ಉನ್ನತ ಸಂಸ್ಥೆಯಾಗಿರುವ ‘ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ’ (ಸಿಎಬಿಇ) 2016ರ ಆಗಸ್ಟ್‌ನಲ್ಲಿ ತಿಳಿಸಿತ್ತು ಮತ್ತು ಈ ಕುರಿತ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಇದೀಗ ಮುಂದಿನ ಅಧಿವೇಶನದಲ್ಲಿ ಸೆಕ್ಷನ್ 16 ತಿದ್ದುಪಡಿ ಮಸೂದೆಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಂಡಿಸಲಿದೆ.
ಭಾರತದಲ್ಲಿ ಅಂತರಾಷ್ಟ್ರೀಯ ದರ್ಜೆಯ ಶಿಕ್ಷಣ ಸಂಸ್ಥೆಗಳು ಅತ್ಯಂತ ಕಡಿಮೆ ಇವೆ ಎಂಬ ಕಳವಳದ ಹಿನ್ನೆಲೆಯಲ್ಲಿ ‘ಶ್ರೇಷ್ಠ ಶಿಕ್ಷಣ ಸಂಸ್ಥೆ’ ಎಂಬ ಮಸೂದೆಯನ್ನು ಸಿದ್ದಪಡಿಸಲಾಗಿದೆ. ದೇಶದ ಇತರ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದರೆ ಈ ‘ ಶ್ರೇಷ್ಠ ಶಿಕ್ಷಣ ಸಂಸ್ಥೆ’ ಹೆಚ್ಚಿನ ಸ್ವಾಯತ್ತತೆ ಹೊಂದಿರುತ್ತದೆ. ಸ್ಥಳೀಯ ಹಾಗೂ ವಿದೇಶಿ ವಿದ್ಯಾರ್ಥಿಗಳ ಶುಲ್ಕದ ಸ್ವರೂಪವನ್ನು ‘ಶ್ರೇಷ್ಠ ಶಿಕ್ಷಣ ಸಂಸ್ಥೆ’ ನಿರ್ಧರಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಪಠ್ಯಕ್ರಮದ ಅವಧಿ, ಸ್ವರೂಪವನ್ನು ಈ ಶಿಕ್ಷಣ ಸಂಸ್ಥೆಗಳು ನಿರ್ಧರಿಸಬಹುದಾಗಿದೆ. ಅಲ್ಲದೆ ವಿದೇಶಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಕುರಿತು ಈ ಸಂಸ್ಥೆಗಳು ಸರಕಾರ ಅಥವಾ ಯುಜಿಸಿಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ (ವಿದೇಶ ವ್ಯವಹಾರ ಸಚಿವಾಲಯದ ನಿಷೇಧದ ಪಟ್ಟಿಯಲ್ಲಿರುವ ರಾಷ್ಟ್ರಗಳ ಶಿಕ್ಷಣ ಸಂಸ್ಥೆಯನ್ನು ಹೊರತುಪಡಿಸಿ).
ಹೀಗೆ ಗುರುತಿಸಲಾದ ಸಂಸ್ಥೆಗಳಿಗೆ 10 ವರ್ಷದ ಅವಧಿಯೊಳಗೆ ವಿಶ್ವದ 500 ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎನ್ನುವ ಗುರಿ ನಿಗದಿಪಡಿಸಲಾಗುತ್ತದೆ. ಆ ಬಳಿಕ ವಿಶ್ವದ 100 ಉನ್ನತ ಶಿಕ್ಷಣ ಸಂಸ್ಥೆಯ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬ ಗುರಿ ನೀಡಲಾಗುತ್ತದೆ. ಈ ಪ್ರಸ್ತಾವನೆಯ ಕುರಿತು ಜೂನ್ 7ರಂದು ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ನಡೆದು, ‘ಹೆಚ್ಚಿನ ಸ್ವಾಯತ್ತತೆ’ ವಿಷಯದ ಬಗ್ಗೆ ಕಳವಳ ವ್ಯಕ್ತವಾದ ಬಳಿಕ ಈ ವಿಷಯವನ್ನು ಸಚಿವರ ತಂಡವೊಂದಕ್ಕೆ ವಹಿಸಲು ನಿರ್ಧರಿಸಲಾಯಿತು.
ಅದರಂತೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಜವಳಿ ಸಚಿವೆ ಸ್ಮತಿ ಇರಾನಿ, ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೊಳಗೊಂಡ ತಂಡವೊಂದು ಎರಡು ಬಾರಿ ಸಭೆ ನಡೆಸಿದ್ದು ಕೆಲವೊಂದು ತಿದ್ದುಪಡಿಯನ್ನು ಸೂಚಿಸಿದೆ.







