ಹುಲಿಗಳ ಸಂತತಿಯಿಂದ ಅರಣ್ಯ ಸಂರಕ್ಷಣೆ ಸಾಧ್ಯ: ಅಂಬಾಡಿ ಮಾಧವ್

ಗುಂಡ್ಲುಪೇಟೆ, ಆ.3: ಮಾನವನು ಬದುಕಲು ಬೇಕಾದ ಆಮ್ಲಜನಕ ಹಾಗೂ ನೀರು ದೊರಕಲು ಅರಣ್ಯಗಳ ಸಂರಕ್ಷಣೆ ಅತ್ಯಗತ್ಯವಿದ್ದು ಹುಲಿಗಳ ಸಂತತಿ ಹೆಚ್ಚಳದಿಂದ ಮಾತ್ರ ಸಾದ್ಯವಾಗುತ್ತದೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹೇಳಿದರು.
ಅರಣ್ಯ ಇಲಾಖೆಯು ಬಂಡೀಪುರದಲ್ಲಿ ಆಯೋಜಿಸಿದ್ದ 7ನೇ ಅಂತರರಾಷ್ಟ್ರೀಯ ಹುಲಿದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹುಲಿಯ ಧೈರ್ಯ, ಬುದ್ದಿವಂತಿಕೆ, ಸಹನೆ ಹಾಗೂ ಸಾಹಸವನ್ನು ಗುರುತಿಸಿದ ಭಾರತವು ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಿ ಇದರ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಫಲವಾಗಿ ವಿಶ್ವದಲ್ಲಿನ ಬಹುಪಾಲು ಹುಲಿಗಳು ಭಾತರದಲ್ಲಿವೆ. ಅದರಲ್ಲಿಯೂ ಅತಿ ಹೆಚ್ಚು ಕರ್ನಾಟಕದಲ್ಲಿರುವು ಹೆಮ್ಮೆಯ ಸಂಗತಿ. ಬಂಡೀಪುರವನ್ನು ಹುಲಿಯೋಜನೆಗೆ ಒಳಪಡಿಸಿದಾಗ ಬೆರಳೆಣಿಕೆಯಿದ್ದ ಹುಲಿಗಳ ಸಂಖ್ಯೆಯು ಇಂದು ಶತಕವನ್ನು ದಾಟಲು ಸಾಧ್ಯವಾಗಿದೆ. ಒಂದು ಹುಲಿಯು ಕನಿಷ್ಟ 25 ಚದರ ಕಿಮೀ ಅರಣ್ಯವನ್ನು ರಕ್ಷಿಸುತ್ತಿದ್ದು, ಇವುಗಳ ಸಂತತಿ ಹೆಚ್ಚಳದಿಂದ ಅರಣ್ಯಾಭಿವೃದ್ದಿಯಾಗಲಿದೆ. ಇದರ ಮೂಲಕ ಉತ್ತಮ ಪರಿಸರ, ಜಲಮೂಲಗಳ ವೃದಿಯಾಗಿ ಮನುಷ್ಯನಿಗೆ ಬೇಕಾದ ಗಾಳಿ ಹಾಗೂ ನೀರು ದೊರಕಲು ಸಾಧ್ಯವಾಗಿದೆ ಎಂದರು.
ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಕಾಡಿನ ಹಾಗೂ ವನ್ಯಜೀವಿಗಳ ಪರಿಚಯ ಮಾಡುವ ಮೂಲಕ ಭವಿಷ್ಯದಲ್ಲಿ ಅರಣ್ಯ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ಅರಣ್ಯನಾಶದಿಂದಾಗಿ ಇಂದಿನ ದಿನಗಳಲ್ಲಿ ಮಳೆಯ ಕೊರತೆಯಾಗುತ್ತಿದೆ. ಋತುಮಾನಗಳಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಕಾಡಂಚಿನ ಗ್ರಾಮಗಳ ಜನರಿಗೆ ಸರ್ಕಾರವು ಉಚಿತ ಅನಿಲ ಸಂಪರ್ಕ ನೀಡುವ ಮೂಲಕ ಉರುವಲಿಗಾಗಿ ಮರಗಳನ್ನು ಕಡಿಯುವುದನ್ನು ನಿಯಂತ್ರಿಸಿದೆ. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಅರಣ್ಯದ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ಮೂಲಕ ಮುಂಬರುವ ದಿನಗಳಲ್ಲಿ ಇವರ ಕೊಡುಗೆಯನ್ನು ಪಡೆಯಬಹುದು ಎಂದರು.
ಗೌರವ ವನ್ಯಜೀವಿ ಪರಿಪಾಲಕ ಕಳಲೆ ಚೋಳರಾಜು, ಎಸ್ ಟಿ ಪಿ ಎಫ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಜಿಪಂ ಸದಸ್ಯ ಬಿ.ಕೆ.ಬೊಮ್ಮಯ್ಯ ಮಾತನಾಡಿದರು. ಪ್ರಬಂಧ ಹಾಗೂ ಚಿತ್ರರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಥೋನಿ ಮರಿಯಪ್ಪ, ಕೆ.ಪರಮೇಶ್, ಆರ್‌ಎಫ್‌ಓಗಳಾದ ಗೋವಿಂದರಾಜು, ಶಿವಾನಂದ ಮುಗದುಂ, ಪುಟ್ಟಸ್ವಾಮಿ, ಹರೀಶ್,ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.







