ಹಸನ್ ರೂಹಾನಿಯಿಂದ ಇರಾನ್ ಅಧ್ಯಕ್ಷರಾಗಿ 2ನೆ ಅವಧಿಗೆ ಪ್ರಮಾಣ

ಟೆಹರಾನ್, ಆ. 3: ಇರಾನ್ ಅಧ್ಯಕ್ಷ ಹಸನ್ ರೂಹಾನಿ ಗುರುವಾರ ಎರಡನೆ ಅವಧಿಗೆ ದೇಶದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ಸರ್ವೋಚ್ಚ ನಾಯಕ ಆಯತುಲ್ಲಾ ಖಾಮಿನೈಯಿಂದ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ದೇಶವನ್ನು ಪ್ರತ್ಯೇಕತೆಯ ಕೂಪದಿಂದ ಹೊರತರುವ ತನ್ನ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಘೋಷಿಸಿದರು.
‘‘ಪ್ರತ್ಯೇಕತೆಯನ್ನು ನಾವು ಎಂದಿಗೂ ಸ್ವೀಕರಿಸುವುದಿಲ್ಲ’’ ಎಂದು ಟೆಹರಾನ್‌ನಲ್ಲಿ ನಡೆದ ಇರಾನ್‌ನ ರಾಜಕೀಯ ನಾಯಕರು ಮತ್ತು ಸೇನಾಧಿಕಾರಿಗಳ ಕಿಕ್ಕಿರಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೂಹಾನಿ ಹೇಳಿದರು.
‘‘ಪರಮಾಣು ಒಪ್ಪಂದವು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇರಾನ್‌ನ ಸದ್ಭಾವನೆಯ ಸಂಕೇತವಾಗಿದೆ’’ ಎಂದರು.
ಇರಾನ್ 2015ರಲ್ಲಿ ಪ್ರಬಲ ದೇಶಗಳೊಂದಿಗೆ ತನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಒಪ್ಪಂದವೊಂದನ್ನು ಮಾಡಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
68 ವರ್ಷದ ಸೌಮ್ಯವಾದಿ ನಾಯಕ ಪಶ್ಚಿಮದ ದೇಶಗಳೊಂದಿಗಿನ ಸಂಬಂಧವನ್ನು ಮತ್ತೆ ಬೆಳೆಸಲು ಮುಂದಾಗಿದ್ದಾರೆ.
ದಿಗ್ಬಂಧನ ಪರಮಾಣು ಒಪ್ಪಂದದ ಉಲ್ಲಂಘನೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ನೂತನ ಆರ್ಥಿಕ ದಿಗ್ಬಂಧನಗಳು ಅಮೆರಿಕ ಮತ್ತು ಇತರ ಬಲಾಢ್ಯ ದೇಶಗಳೊಂದಿಗೆ ಅಮೆರಿಕ ಮಾಡಿಕೊಂಡಿರುವ ಪರಮಾಣು ಒಪ್ಪಂದದ ಶರತ್ತುಗಳನ್ನು ಉಲ್ಲಂಘಿಸುತ್ತದೆ ಎಂದು ಇರಾನ್ ಬುಧವಾರ ಹೇಳಿದೆ ಹಾಗೂ ಇದಕ್ಕೆ ‘ಸೂಕ್ತ ಮತ್ತು ಸರಿಯಾದ ಪ್ರತಿಕ್ರಿಯೆಯನ್ನು ನೀಡುವುದಾಗಿ ಅದು ಹೇಳಿದೆ.
2015ರ ಒಪ್ಪಂದದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂಸ್ಥೆಗೆ ಈ ಬಗ್ಗೆ ದೂರು ನೀಡುವುದಾಗಿ ಇರಾನ್ ಈಗಾಗಲೇ ಹೇಳಿದೆ.







