ಸೀಮಿತ ವಲಸೆಗೆ ಅವಕಾಶ ನೀಡುವ ಮಸೂದೆಗೆ ಟ್ರಂಪ್ ಸಹಿ

ವಾಶಿಂಗ್ಟನ್, ಆ. 3: ಕೆನಡ ಮತ್ತು ಆಸ್ಟ್ರೇಲಿಯದಲ್ಲಿರುವಂತೆ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಗೆ ಅವಕಾಶ ಮಾಡಿಕೊಡುವ ಶಾಸನಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ.
ರಿಪಬ್ಲಿಕನ್ ಸೆನೆಟರ್‌ಗಳಾದ ಟಾಮ್ ಕಾಟನ್ ಮತ್ತು ಡೇವಿಡ್ ಪರ್ಡ್ಯೂ ಫೆಬ್ರವರಿಯಲ್ಲಿ ಮಂಡಿಸಿರುವ ಮಸೂದೆಯು ಕಾನೂನುಬದ್ಧ ವಲಸಿಗರ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸುತ್ತದೆ ಹಾಗೂ ಆ ಮೂಲಕ ಪ್ರತಿ ವರ್ಷ ನೀಡಲಾಗುವ ಹಸಿರು ಕಾರ್ಡ್‌ಗಳ ಸಂಖ್ಯೆಯೂ ಕಡಿಮೆಯಾಗಲಿದೆ.
ಮಸೂದೆಯು ಸುಮಾರು ಅರ್ಧ ಶತಮಾನದಲ್ಲೇ ನಮ್ಮ ವಲಸೆ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಸುಧಾರಣೆಯೊಂದಕ್ಕೆ ನಾಂದಿ ಹಾಡುತ್ತದೆ ಎಂದು ಶ್ವೇತಭವನದಲ್ಲಿ ಸಹಿ ಹಾಕಿದ ಬಳಿಕ ಮಾತನಾಡಿದ ಟ್ರಂಪ್ ಅಭಿಪ್ರಾಯಪಟ್ಟರು.
ಇಂಗ್ಲಿಷ್ ಮಾತನಾಡಬಲ್ಲ, ಆರ್ಥಿಕವಾಗಿ ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಪೋಷಿಸಬಲ್ಲ ಹಾಗೂ ನಮ್ಮ ಆರ್ಥಿಕತೆಗೆ ದೇಣಿಗೆ ನೀಡುವ ಕೌಶಲವನ್ನು ಹೊಂದಿರುವ ವಲಸಿಗರನ್ನು ಮಾತ್ರ ಈ ಮಸೂದೆಯು ಒಳಗೆ ಬಿಡುತ್ತದೆ ಎಂದರು.
ಭಾರತೀಯರಿಗೆ ಪೂರಕವೇ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದಿಸಿರುವ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಯು ಭಾರತದಂಥ ದೇಶಗಳ ಅತ್ಯುನ್ನತ ಶಿಕ್ಷಣ ಪಡೆದ ತಾಂತ್ರಿಕ ವೃತ್ತಿಪರರಿಗೆ ಪೂರಕವಾಗಿದೆ ಎಂದು ಹೇಳಲಾಗಿದೆ.
ನೂತನ ವ್ಯವಸ್ಥೆಯು ಅಮೆರಿಕಕ್ಕೆ ತೆರಳಲು ಈಗ ಇರುವ ಲಾಟರಿ ವ್ಯವಸ್ಥೆಯನ್ನು ತೊಡೆದುಹಾಕುತ್ತದೆ ಹಾಗೂ ಹಸಿರು ಕಾರ್ಡು (ಅಮೆರಿಕ ವಾಸ್ತವ್ಯಕ್ಕೆ ಅಗತ್ಯ) ಪಡೆಯಲು ಅಂಕ ಆಧಾರಿತ ವ್ಯವಸ್ಥೆಯೊಂದನ್ನು ಸೃಷ್ಟಿಸುತ್ತದೆ.
ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ, ಶಿಕ್ಷಣ, ಅತ್ಯುತ್ತಮ ಸಂಬಳದ ಉದ್ಯೋಗಾವಕಾಶಗಳು ಮತ್ತು ವಯಸ್ಸು ಮುಂತಾದ ಅಂಶಗಳನ್ನು ಇಲ್ಲಿ ಪರಿಗಣಿಸಲಾಗುತ್ತದೆ.







