ಪೂರ್ಣ ಪ್ರಮಾಣದ ಯುದ್ಧ: ರಶ್ಯ
ರಶ್ಯ ವಿರುದ್ಧ ಅಮೆರಿಕದ ಆರ್ಥಿಕ ದಿಗ್ಬಂಧನ

ಮಾಸ್ಕೊ, ಆ. 3: ಅಮೆರಿಕ ರಶ್ಯದ ಮೇಲೆ ಹೊಸದಾಗಿ ವಿಧಿಸಿರುವ ಆರ್ಥಿಕ ದಿಗ್ಬಂಧನಗಳು ರಶ್ಯದ ಮೇಲೆ ಸಾರಿದ ‘ಪೂರ್ಣ ಪ್ರಮಾಣದ ಆರ್ಥಿಕ ಯುದ್ಧವಾಗಿದೆ’ ಎಂದು ರಶ್ಯ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಬಣ್ಣಿಸಿದ್ದಾರೆ.
ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವ ನಿರೀಕ್ಷೆಯನ್ನು ನುಚ್ಚುನೂರುಗೊಳಿಸಿದೆ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ದೌರ್ಬಲ್ಯವನ್ನು ಅತ್ಯಂತ ಅವಮಾನಕರ ರೀತಿಯಲ್ಲಿ’ ಪ್ರದರ್ಶಿಸಿದೆ ಎಂದು ಅವರು ಹೇಳಿದ್ದಾರೆ.
ಆಂತರಿಕ ಒತ್ತಡಕ್ಕೆ ಮಣಿದ ಟ್ರಂಪ್ ಬುಧವಾರ ದಿಗ್ಬಂಧನೆ ಮಸೂದೆಗೆ ಮನಸ್ಸಿಲ್ಲದ ಮನಸ್ಸಿನಿಂದ ಸಹಿ ಹಾಕಿದರು. ಇನ್ನು ಅದು ಕಾನೂನಾಗಿ ಕಾರ್ಯರೂಪಕ್ಕೆ ಬರಲಿದೆ.
ಈ ಮೊದಲು ಶ್ವೇತಭವನವು ಮಸೂದೆಯನ್ನು ವಿಫಲಗೊಳಿಸಲು ಯತ್ನಿಸಿತಾದರೂ, ಅದರ ಪ್ರಯತ್ನಗಳು ಫಲಿಸಲಿಲ್ಲ.
ಇದಕ್ಕೆ ‘ಪ್ರತಿಕ್ರಿಯೆ’ಗಳು ಇರುತ್ತವೆ ಎಂದು ಎಚ್ಚರಿಸಿದ ಮೆಡ್ವೆಡೆವ್, ಇದು ಅಮೆರಿಕದ ನೂತನ ಆಡಳಿತದೊಂದಿಗಿನ ನಮ್ಮ ಸಂಬಂಧಗಳನ್ನು ಸುಧಾರಿಸುವ ಭರವಸೆಯನ್ನು ಹುಸಿಗೊಳಿಸಿದೆ ಎಂದರು.
‘‘ಎರಡನೆಯದಾಗಿ, ಅದು ರಶ್ಯದ ವಿರುದ್ಧ ಘೋಷಿಸಿದ ಪೂರ್ಣಪ್ರಮಾಣದ ಆರ್ಥಿಕ ಯುದ್ಧವಾಗಿದೆ’’ ಎಂದು ಮೆಡ್ವೆಡೆವ್ ತನ್ನ ‘ಫೇಸ್‌ಬುಕ್’ ಪುಟದಲ್ಲಿ ಬರೆದಿದ್ದಾರೆ.
ಅಮೆರಿಕದ ಅಧ್ಯಕ್ಷ ಟ್ರಂಪ್‌ರನ್ನು ತಮಾಷೆ ಮಾಡಿದ ಅವರು, ‘‘ಅತ್ಯಂತ ಅವಮಾನಕರ ರೀತಿಯಲ್ಲಿ ಕಾರ್ಯಕಾರಿ ಅಧಿಕಾರವನ್ನು ಸೆನೆಟ್‌ಗೆ ಕೊಡುವ ಮೂಲಕ ಟ್ರಂಪ್ ಆಡಳಿತ ತನ್ನ ಪೂರ್ಣ ದೌರ್ಬಲ್ಯವನ್ನು ಪ್ರದರ್ಶಿಸಿದೆ’’ ಎಂದು ಹೇಳಿದರು.
ಒಲ್ಲದ ಮನಸ್ಸಿನಿಂದ ಟ್ರಂಪ್ ಸಹಿ
ರಶ್ಯದ ಮೇಲೆ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸುವ ಸೆನೆಟ್ ಮಸೂದೆಗೆ ಅಮೆರಿಕದ ಅಧ್ಯಕ್ದ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ.
ಈ ಮಸೂದೆಯನ್ನು ಕಳೆದ ವಾರ ಭಾರೀ ಬಹುಮತದೊಂದಿಗೆ ಕಾಂಗ್ರೆಸ್‌ನ ಎರಡೂ ಚೇಂಬರ್‌ಗಳು ಭಾರೀ ಬಹುಮತದಿಂದ ಅಂಗೀಕರಿಸಿದವು.
ಮಸೂದೆಯನ್ನು ತಡೆಯುವ ಶ್ವೇತಭವನದ ಎಲ್ಲ ಪ್ರಯತ್ನಗಳು ವಿಫಲಗೊಂಡ ಬಳಿಕ, ಒಲ್ಲದ ಮನಸ್ಸಿನಿಂದಲೇ ಅವರು ಸಹಿ ಹಾಕಿದ್ದಾರೆ ಎನ್ನಲಾಗಿದೆ.







