ಮನೆಯಿಂದಲೇ ಕಾನೂನು ಶಿಕ್ಷಣ ಪ್ರಾರಂಭ: ನ್ಯಾ.ರಾಮಚಂದ್ರ ಹುದ್ದಾರ
ಧಾರವಾಡ, ಆ.3: ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅರಿವು, ತಿಳಿವಳಿಕೆ ಇರುವುದು ಬಹಳ ಮುಖ್ಯ, ಮಕ್ಕಳಿಗೆ ಕಾನೂನು ಶಿಕ್ಷಣ ಮೊದಲು ಪ್ರಾರಂಭವಾಗುವುದೆ ಮನೆಯಿಂದ, ‘ಮೊದಲ ಗುರು’ ತಾಯಿ ಪ್ರತಿ ಮನೆಯಿಂದ ಪ್ರಾರಂಭವಾಗುವ ಶಿಕ್ಷಣ ಉತ್ತಮ ಸಮಾಜ ನಿರ್ಮಾಣದ ಪ್ರಜೆಗಳನ್ನು ರೂಪಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಹೇಳಿದ್ದಾರೆ.
ಗುರುವಾರ ನಗರದ ಆರ್.ಎಲ್.ಎಸ್.ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾನೂನು ಸಾಕ್ಷರತಾ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬರಿಗೂ ಕಾನೂನಿನ ತಿಳಿವಳಿಕೆ ಅವಶ್ಯಕ. ವಿಶೇಷವಾಗಿ ಮಕ್ಕಳಿಗೆ ಕಾನೂನಿನ ಅರಿವು ಮೂಡಿಸುವುದರಿಂದ ಅವರು ಮುಂದೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
12ನೆ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ವಚನಗಳ ಪ್ರತಿ ನುಡಿಗಳು ಒಂದು ಕಾನೂನಂತಿದ್ದವು, ವಿದ್ಯಾರ್ಥಿ ಜೀವನದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಒಬ್ಬರ ಪರೀಕ್ಷೆಯನ್ನು ಮತ್ತೊಬ್ಬರು ಬರೆಯುವುದು ಅಪರಾಧ. ಇದರಿಂದ ಶ್ರದ್ಧಾವಂತ ವಿದ್ಯಾರ್ಥಿಗೆ ಅನ್ಯಾಯವಾಗುತ್ತದೆ ಎಂದು ರಾಮಚಂದ್ರ ಹುದ್ದಾರ ತಿಳಿಸಿದರು.
ಇದು ಅಪರಾಧ ಎಂಬ ಅರಿವು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಇಂತಹ ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ ಅವರಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅತೀ ಅವಶ್ಯಕ. ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಇದ್ದರೆ ಯಾವುದೇ ತಪ್ಪುಗಳು ನಡೆಯುವುದಿಲ್ಲ. ಅವರಿಗೆ ಯಾವುದೇ ರೀತಿಯ ಶಿಕ್ಷೆಗಳು ಬರುವುದಿಲ್ಲ ಎಂದು ಅವರು ಹೇಳಿದರು.
ಪ್ರಾಮಾಣಿಕತೆಯಿಂದಿರುವ ಮಕ್ಕಳು ಜೀವನದಲ್ಲಿ ಮುಂದೆ ಬರುತ್ತಾರೆ. ಅವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಶ್ರದ್ಧೆ, ಪ್ರಾಮಾಣಿಕತೆಯಿಂದಿರಬೇಕು ಮತ್ತು ಹಿರಿಯರಿಗೆ ಹಾಗೂ ಹೆತ್ತವರಿಗೆ ಗೌರವ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ತುಂಬಾಕು ಮುಕ್ತ ಶಾಲೆಯಿಂದ ಎಲ್ಲ ಶಾಲೆಗಳಲ್ಲಿಯೂ ಬರೆಯಲಾಗಿರುತ್ತದೆ. ಮಕ್ಕಳು ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು. ಒಂದು ವೇಳೆ ಗುಟ್ಕಾ, ತಂಬಾಕು ತಿನ್ನುವುದು ಕಾನೂನಾತ್ಮಕ ಅಪರಾಧ. ಕತ್ತೆಗಳು ತಿನ್ನದ ತಂಬಾಕನ್ನು ಯಾರು ತಿನ್ನಬಾರದು. ಅದರಿಂದ ಸಾವು ಸಂಭವಿಸುತ್ತದೆ. ಶಾಲೆಯ ಪಠ್ಯದೊಂದಿಗೆ ಅಗತ್ಯ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ರಾಮಚಂದ್ರ ಹುದ್ದಾರ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಹುಡೇದಮನಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಗೇರ, ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ, ಆರ್.ಎಲ್.ಎಸ್.ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ.ಶಿಂಘೆ, ಪ್ರೌಢಶಾಲೆಯ ಉಪಪ್ರಾಚಾರ್ಯ ವೀರೆಂದ್ರ ಹಿರೇಮಠ ಉಪಸ್ಥಿತರಿದ್ದರು.







