ಆ.8ರ ನಂತರ ದಾಳಿ ನಡೆಸಿದ್ದರೆ ‘ಗಂಡಸರು’ ಎನ್ನಬಹುದಿತ್ತು: ರಮೇಶ್ ಜಾರಕಿಹೊಳಿ
_0.jpg)
ಬೆಳಗಾವಿ, ಆ. 3: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯನ್ನು ಆ.8ರ ನಂತರ ಮಾಡಿಸಿದ್ದರೆ ‘ಗಂಡಸರು’ ಎನ್ನುತ್ತಿದ್ದೆವು ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾವೆಲ್ಲರೂ ಬೆಂಬಲವಾಗಿದ್ದೇವೆ. ಐಟಿ ದಾಳಿ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಅಜೆಂಡಾ. ಸಂವಿಧಾನ ಸಂಸ್ಥೆಗಳನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಮೋದಿ ಹಿಟ್ಲರ್ ನೀತಿ ಅನುಸರಿಸುತ್ತಿದ್ದು, ನನ್ನ ನಿವಾಸದ ಮೇಲೆಯೂ ಈ ಹಿಂದೆ ದಾಳಿ ನಡೆಸಿದ್ದರು, ನಿನ್ನೆ ಶಿವಕುಮಾರ್ ಅವರ ನಿವಾಸದ ವೆುೀಲೆ ದಾಳಿ ಮಾಡಿದ್ದು, ಮುಂದೆ ಸಚಿವ ಎಂ.ಬಿ.ಪಾಟೀಲ್ ಅವರ ನಿವಾಸದ ಮೇಲೆಯೂ ಐಟಿ ದಾಳಿ ನಡೆಯಬಹುದು ಎಂದು ನುಡಿದರು.
ಮೋದಿ, ಅಮಿತ್ ಷಾ ಅವರ ಆಸೆಯಂತೆ ರಾಜ್ಯ ಮಂತ್ರಿ ಮಂಡಲದ ಸಚಿವರನ್ನು ಕಾರಾಗೃಹಗಳಿಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ವಿಚಲಿತರಾಗುವುದಿಲ್ಲ. ಬದಲಿಗೆ ಅದಕ್ಕೆ ಸಿದ್ಧವಾಗಿದ್ದೇವೆ. ಸರ್ವಾಧಿಕಾರಿ ನೀತಿ ಎದುರಿಸಲು ನಾವು ತಯಾರಾಗಿದ್ದೇವೆ ಎಂದರು.







